ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ಮತ್ತು ಚಲನಚಿತ್ರ ನಿರ್ಮಾಪಕ ಮನೋಜ್ ಕುಮಾರ್ (87) ಶುಕ್ರವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಅವರು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಮನೋಜ್ ಕುಮಾರ್ ಅವರು ‘ದೋ ಬದನ್’, ‘ಹರಿಯಾಲಿ ಔರ್ ರಾಸ್ತಾ’ ಮತ್ತು ‘ಗುಮ್ನಾಮ್’ನಂತಹ ಹಿಟ್ ಚಿತ್ರಗಳಿಗೆ ಹೆಸರುವಾಸಿಯಾಗಿದ್ದರು. ದೇಶಭಕ್ತಿ ಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಅವರ ‘ಪುರಬ್ ಔರ್ ಪಶ್ಚಿಮ್’ ಚಿತ್ರದ ‘ಭಾರತ್ ಕಾ ರೆಹನೇ ವಾಲಾ ಹೂಂ, ಭಾರತ್ ಕಿ ಬಾತ್ ಸುನಾತಾ ಹೂಂ…’ ಹಾಡುಗಳು ಇಂದಿಗೂ ಜನಪ್ರಿಯವಾಗಿದೆ. ಅಭಿಮಾನಿಗಳು ಅವರನ್ನು ‘ಭರತ್ ಕುಮಾರ್’ ಎಂದೂ ಕರೆಯುತ್ತಾರೆ.
ಜುಲೈ 24, 1937ರಂದು ಪಂಜಾಬ್‌ನ ಅಮೃತಸರದಲ್ಲಿ ಹರಿಕೃಷ್ಣ ಗೋಸ್ವಾಮಿಯಾಗಿ ಜನಿಸಿದ ಮನೋಜ್ ಕುಮಾರ್ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ ಸೃಷ್ಟಿಸಿಕೊಂಡಿದ್ದರು. ಶಹೀದ್, ಉಪ್ಕಾರ್ ಮತ್ತು ರಂಗ್ ದೇ ಬಸಂತಿ ಮುಂತಾದ ಚಿತ್ರಗಳಲ್ಲಿನ ಅವರ ಅಪ್ರತಿಮ ಪಾತ್ರಗಳು ಜನರಲ್ಲಿ ದೇಶಭಕ್ತಿಯ ಭಾವನೆಗಳೊಂದಿಗೆ ಆಳವಾಗಿ ಸಂಪರ್ಕ ಹೊಂದಿದ್ದವು.
ನಿಧನದ ಸುದ್ದಿ ದೃಢಪಡಿಸಿದ ಪುತ್ರ ಕುನಾಲ್ ಗೋಸ್ವಾಮಿ: ಮನೋಜ್ ಕುಮಾರ್ ನಿಧನದ ಬಗ್ಗೆ ಅವರ ಪುತ್ರ ಕುನಾಲ್ ಗೋಸ್ವಾಮಿ ದೃಢಪಡಿಸಿದ್ದಾರೆ. ನಾಳೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ. ‘ಮನೋಜ್ ಕುಮಾರ್ ಅವರು ಬಹಳ ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರು ಇಹಲೋಕ ತ್ಯಜಿಸಿದ್ದು, ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ’ ಎಂದು ಕುನಾಲ್ ಹೇಳಿದರು.