ಬೆಂಗಳೂರು : ಡಿಸಿಎಂ ಡಿ.ಕೆ. ಶಿವಕುಮಾರ್ ಕಚೇರಿ ಹಾಗೂ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಒಡ್ಡಿರುವ ಘಟನೆ ಶನಿವಾರ ನಡೆದಿದೆ.ಇ-ಮೇಲ್ ಮೂಲಕ ಬೆದರಿಕೆ ಪತ್ರ ಬಂದು ತಲುಪಿದ್ದು ವಿಮಾನ ನಿಲ್ಧಾಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇ ಮೇಲ್ ಪ್ರತಿ ತಲುಪಿದೊಡನೇ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ತಪಾಸಣೆ ಕೈಗೊಂಡಿದ್ದಾರೆ. ಶ್ವಾನ ಪಡೆ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳು ಪರಿಶೀಲನೆ ನಡೆಸಿದೆ. ಮೇಲ್ನೋಟಕ್ಕೆ ಇದೊಂದು ಹುಸಿ ಬಾಂಬ್ ಬೆದರಿಕೆ ಪತ್ರ ಎಂದು ತಿಳಿದುಬಂದಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.
ಟರ್ಮಿನಲ್ ಮ್ಯಾನೇಜರ್ ಅವರ ಇಮೇಲ್ ವಿಳಾಸಕ್ಕೆ ನಿನ್ನೆ ರಾತ್ರಿ ಇ ಮೇಲ್ ಕಳುಹಿಸಲಾಗಿತ್ತು. ಇ ಮೇಲ್ ನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡು ಟರ್ಮಿನಲ್ ಗಳಲ್ಲಿ 4 ಸುಧಾರಿತ ಸ್ಪೋಟಕಗಳನ್ನು ಇಡಲಾಗಿದೆ.
ಇವುಗಳು ಸುಮಾರು 11.00 ಗಂಟೆಗೆ ಸ್ಪೋಟಗೊಳ್ಳಲಿವೆ ಎಂದು ಉಲ್ಲೇಖಿಸಲಾಗಿತ್ತು. ಅಷ್ಟೇ ಅಲ್ಲದೇ, ಇವುಗಳು ಸ್ಪೋಟಗೊಂಡ ಕೆಲವೇ ಹೊತ್ತಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಕಚೇರಿಯಲ್ಲೂ ಸ್ಪೋಟ ನಡೆಯಲಿದೆ ಎಂದು ಹೇಳಲಾಗಿತ್ತು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕಚೇರಿಯಲ್ಲಿಯೂ ಸಹ ಪೊಲೀಸರು ತಪಾಸಣೆ ನಡೆಸಿದ್ದಾರೆ. ಅಲ್ಲಿಯೂ ಸಹ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬರದ ಕಾರಣ ಇದೊಂದು ಹುಸಿಬಾಂಬ್ ಬೆದರಿಕೆ ಎಂಬುದು ಮನದಟ್ಟಾಗಿದೆ.
ಇತ್ತೀಚಿಗೆ ಇಡೀ ದೇಶದಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚುತ್ತಿರುವುದು ಪೊಲೀಸರಿಗೂ ಸಹ ತಲೆನೋವಾಗಿ ಪರಿಣಮಿಸಿದೆ.




