ಬೆಂಗಳೂರು : ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ಇಂದು ಬಂದ್ಗೆ ಕರೆ ಕೊಟ್ಟಿದ್ದು, ಕೆಲವು ಜಿಲ್ಲೆಗಳು ನೀರಸ ಪ್ರತಿಕ್ರಿಯೆ ತೋರಿದೆ. ಗಣಿ ನಾಡು ಬಳ್ಳಾರಿಯಲ್ಲಿ ಎಂದಿನಂತೆ ಅಂಗಡಿ-ಮುಂಗಟ್ಟಿನಿಂದ ಹಿಡಿದು ಎಲ್ಲವೂ ತೆರೆದಿವೆ. ಬಸ್, ಆಟೋ ಸಂಚಾರವಿದ್ದು ಬಳ್ಳಾರಿ ಮಂದಿ ಬಂದ್ಗೆ ಬೆಂಬಲ ನೀಡಿಲ್ಲ.
ಆದರೆ ಬೆಳಗ್ಗೆ ಹತ್ತು ಗಂಟೆಗೆ ರಾಯಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನೈತಿಕ ಬೆಂಬಲ ಕೊಡಲು ಕನ್ನಡಪರ ಸಂಘಟನೆಗಳು ತೀರ್ಮಾನಿಸಿವೆ. ಈ ಹಿನ್ನೆಲೆ ಬಳ್ಳಾರಿ ರಾಯಲ್ ವೃತ್ತದಲ್ಲಿ ಪೊಲೀಸರು ನಿಯೋಜನೆಗೊಂಡಿದ್ದಾರೆ. ಬಳ್ಳಾರಿ ರಾಯಲ್ ಸರ್ಕಲ್, ಮೋತಿ ಸರ್ಕಲ್ , ಸಂಗಮ್ ಸರ್ಕಲ್ ಸೇರಿದಂತೆ ಬಳ್ಳಾರಿ ಬಹುತೇಕ ರಸ್ತೆಗಳಲ್ಲಿ ಪ್ರತಿನಿತ್ಯದಂತೆ ವಾಹನ ಸಂಚಾರ ಸಾಗುತ್ತಿದೆ.
ವಾಹನ ಸಂಚಾರ ಲಭ್ಯ: ಧಾರವಾಡ, ಹಾವೇರಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಯಲ್ಲಿ ಎಂದಿನಂತೆ ಬಸ್, ಆಟೋ ಸಂಚಾರ ಮತ್ತು ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಹೊಟೇಲ್ಗಳು ಕೂಡ ಓಪನ್ ಆಗಿವೆ.
ಚಿಕ್ಕೋಡಿಯಲ್ಲಿ ಸಹಜ ಸ್ಥಿತಿ: ಚಿಕ್ಕೋಡಿಯಲ್ಲಿ ಎಂದಿನಂತೆ ಬೆಳಗ್ಗೆಯಿಂದ ಆಟೋ ಸೇರಿದಂತೆ ವಾಹನಗಳು ಸಂಚರಿಸುತ್ತಿವೆ. ಅಂಗಡಿ ಮುಂಗಟ್ಟುಗಳು ಓಪನ್ ಆಗಿವೆ.
ಮೈಸೂರಲ್ಲಿ ಪ್ರತಿಭಟನೆ: ಮೈಸೂರಲ್ಲಿ ಪ್ರತಿಭಟನೆಗಷ್ಟೇ ಬಂದ್ ಸೀಮಿತವಾಗಿದೆ. ಬೆಳಗ್ಗೆ ರಸ್ತೆ ತಡೆ ಮಾಡಿದ ಕನ್ನಡಪರ ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು. ಬಳಿಕ ಎಂದಿನಂತೆ ಕೆಎಸ್ಆರ್ಟಿಸಿ ಬಸ್ ಸಂಚಾರ ಸೇರಿ ವ್ಯಾಪಾರ ವಹಿವಾಟ ಆರಂಭವಾಗಿದೆ. ಬಂದ್ಗೆ ಬಹುತೇಕ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿಜಯಪುರದಲ್ಲೂ ನೀರಸ ಪ್ರತಿಕ್ರಿಯೆ : ವಿಜಯಪುರ ಜಿಲ್ಲೆಯಲ್ಲಿಯೀ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಇತರ ಸಂಘ ಸಂಸ್ಥೆಗಳು ಸಾಂಕೇತಿಕವಾಗಿ ಬಂದ್ಗೆ ಬೆಂಬಲ ನೀಡಿವೆ. ಸದ್ಯ ಸಹಜ ಸ್ಥಿತಿಯಲ್ಲಿರುವ ವಿಜಯಪುರದಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರವಿದೆ. ಹಾಗೇ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಮಾಲ್ಗಳು ಚಿತ್ರಮಂದಿರಗಳು ಬಂದ್ಗೆ ಬೆಂಬಲ ನೀಡಿಲ್ಲ. ಆರಂಭ ಎಲ್ಲಿಯೂ ಬಂದ್ ಕಂಡು ಬರದೇ ಇದ್ದರೂ ಮುಂಜಾಗ್ರತಾ ಕ್ರಮವಾಗಿ ಅಲ್ಲಲ್ಲಿ ಪೊಲೀಸರು ನಿಯೋಜನೆಗೊಂಡಿದ್ದಾರೆ.