ದಾವಣಗೆರೆ: ವಿಜಯಪುರ ವಿಧಾನಸಭಾ ಕ್ಷೇತ್ರದ ಶಾಸಕ, ಕೇಂದ್ರ ಮಾಜಿ ಸಚಿವ ಹಾಗೂ ಹಿಂದೂ ಫೈರ್ ಬ್ರ್ಯಾಂಡ್ ಖ್ಯಾತಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಂದಿನ ಎರಡು ತಿಂಗಳಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕರಾಗುವ ಸಾಧ್ಯತೆ ಇದೆ ಎಂದು ಹರಿಹರ ಕ್ಷೇತ್ರದ ಶಾಸಕ ಬಿ.ಪಿ.ಹರೀಶ್ ಅವರು ಹೇಳಿದ್ದಾರೆ.
ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ಪಕ್ಷಕ್ಕೆ ಬಹಳ ಅಗತ್ಯವಿರುವ ನಾಯಕತ್ವ ಗುಣ ಯತ್ನಾಳ್ ಅವರಲ್ಲಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಅವರಲ್ಲಿದೆ. ಯಾವುದೇ ರಾಜಿ ಇಲ್ಲದೆ ಎದುರಾಳಿಗಳನ್ನು ಎದುರಿಸುವ ಯತ್ನಾಳ್, ರಾಜ್ಯ ಬಿಜೆಪಿಯ ಮಾಸ್ ಲೀಡರ್ ಆಗಿದ್ದಾರೆ ಎಂದರು
ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಹರೀಶ್ , “ವಿಜಯೇಂದ್ರ ಪ್ರತಿ ಬಾರಿ, ಪೂಜ್ಯ ತಂದೆಯವರು ಎಂದು ಹೇಳಿಕೊಂಡೇ ಇಲ್ಲಿವರೆಗೆ ಬಂದಿದ್ದಾರೆ. ತಂದೆಯ ಹೆಸರು ಹೇಳುವುದು ಬಿಟ್ಟರೆ, ಅವರ ಸಾಧನೆ ಏನೂ ಇಲ್ಲ. ಪಕ್ಷಕ್ಕೆ ತಮ್ಮ ಕೊಡುಗೆ ಏನು ಎಂಬುದನ್ನು ಅವರೇ ತಿಳಿಸಬೇಕು” ಎಂದು ಸವಾಲು ಹಾಕಿದರು.




