ಬೆಂಗಳೂರು : ಬಿಪಿಎಲ್ ಕಾರ್ಡ್ ಆದಾಯ ಮಿತಿ ಪರಿಷ್ಕರಣೆ ಕುರಿತು ಪ್ರಸ್ತುತ ಕರ್ನಾಟಕದಲ್ಲಿ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ₹1.20 ಲಕ್ಷದ ವಾರ್ಷಿಕ ಆದಾಯ ಮಿತಿಯನ್ನು ಹಣದುಬ್ಬರಕ್ಕೆ ತಕ್ಕಂತೆ ಪರಿಷ್ಕರಿಸುವ ಸಾಧ್ಯತೆ ಇದೆ.
ಪ್ರಸ್ತುತ ಆದಾಯ ಮಿತಿ ವೈಜ್ಞಾನಿಕವಾಗಿಲ್ಲ ಎಂಬ ಕಾರಣಕ್ಕೆ ಇದನ್ನು ಹೆಚ್ಚಿಸಬೇಕೆಂದು ಕೂಗು ಕೇಳಿಬಂದಿದೆ .ಇದರ ನಡುವೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಹಾಗೂ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ.ಸಿ.ಎನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಕೆ ಹೆಚ್ ಮುನಿಯಪ್ಪ ಉತ್ತರಿಸಿದರು.
ಕೇಂದ್ರ ಸರ್ಕಾರ ಬಿ.ಪಿ.ಎಲ್ ಕಾರ್ಡ್ದಾರರ ಆದಾಯ ಮಿತಿಯನ್ನು ರೂ.1.20 ಲಕ್ಷಕ್ಕೆ ಮಿತಿಗೊಳಿಸಿದೆ. ಆದರೆ ಕೂಲಿ ಕೆಲಸಗಾರರಿಗೂ ಪ್ರತಿದಿನ ರೂ.500 ಕೂಲಿ ದೊರೆಯುತ್ತದೆ.
ಇದರ ಆಧಾರದಲ್ಲಿ ಕೂಲಿ ಮಾಡುವವರ ಆದಾಯವೂ ವರ್ಷಕ್ಕೆ ರೂ.1.80 ಲಕ್ಷಕ್ಕೂ ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಇದನ್ನ ಪರಿಷ್ಕರಿಸಲು ಚಿಂತನೆ ನಡೆದಿದೆ ಎಂದು ಸಚಿವರು ಹೇಳಿದರು.
ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆಸಿರುವುದರಿಂದ ತಾತ್ಕಾಲಿಕವಾಗಿ ಯಾವುದೇ ಬಿ.ಪಿ.ಎಲ್.ಕಾರ್ಡುಗಳನ್ನು ರದ್ದು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.




