ಬೆಂಗಳೂರು : ಇಲಾಖೆಯವರು ಬಿಟ್ಟಿಯಾಗಿ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಹಣ ವ್ಯರ್ಥ ಆಗುತ್ತಿದೆ.
ಜನರಿಗೆ ಉಪಯೋಗ ಆಗುತ್ತಿಲ್ಲ. ಹೀಗಾಗಿ ಅನೇಕ ಸರ್ಕಾರದ ಯೋಜನೆಗಳು ವಿಫಲವಾಗುತ್ತಿವೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ತಿಳಿಸಿದರು.
ನಿನ್ನೆ ಗಾಂಧಿಭವನದಲ್ಲಿ ನಡೆದ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಅವಶ್ಯಕತೆ, ಸಾಕ್ಷ್ಯ ಮತ್ತು ಫಲಿತಾಂಶ ಆಧಾರಿತ ನೀತಿ ಹಾಗೂ ಯೋಜನೆ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸರ್ವ ಶಿಕ್ಷಣ ಅಭಿಯಾನದಡಿ ಕಟ್ಟಿದ ಎಲ್ಲಾ ಶಾಲಾ ಕಟ್ಟಡಗಳು ಖಾಲಿ ಬಿದ್ದಿವೆ, ಅಲ್ಲಿ ವಿದ್ಯಾರ್ಥಿಗಳು ಸಹ ಇಲ್ಲ, ಶಿಕ್ಷಕರು ಮೊದಲೇ ಇಲ್ಲ.ನನ್ನ ಕ್ಷೇತ್ರದಲ್ಲಿ ನಾನೇ ಕೇಳೇ ಇಲ್ಲ, ನನಗೆ ಗೊತ್ತೂ ಇಲ್ಲ. ಆದರೆ ಒಂದು ಗ್ರಾಮದಲ್ಲಿ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಿ ದೊಡ್ಡ ಹಾಸ್ಟೆಲ್ ಕಟ್ಟಲು ಹಣ ಮಂಜೂರಾಗಿದೆ. ಅಷ್ಟು ದೊಡ್ಡ ಹಾಸ್ಟೆಲ್ ಅಗತ್ಯನೂ ಇಲ್ಲ. ಇದೇ ರೀತಿ ಅನೇಕ ಕಡೆ ಹಾಸ್ಟೆಲನ್ನು ಕಟ್ಟಲಾಗಿದೆ. ಮಕ್ಕಳು ಅಲ್ಲಿ ಇಲ್ಲ.
ಈ ರೀತಿ ಅನೇಕ ಕಡೆ ಹಣ ವ್ಯರ್ಥ ಆಗುತ್ತದೆ. ಬೇಡಿಕೆ ಆಧಾರದಲ್ಲಿ ಯೋಜನೆ ಕೊಡಬೇಕು ಎಂದು ತಿಳಿಸಿದರು.ಯೋಜನೆ ಸಂಪೂರ್ಣವಾಗಿ ಹಳಿ ತಪ್ಪಿ ಹೋಗುತ್ತಿದೆ. ಆ ಮೂಲಕ ಹಣ ವ್ಯರ್ಥವಾಗುತ್ತಿದೆ. ಮೊದಲೇ ಹಣದ ಕೊರತೆ ಇದೆ.
ಇತಿ ಮಿತಿಯಲ್ಲಿ ಯೋಜನೆ ರೂಪಿಸಿ ಅನುಷ್ಠಾನ ಮಾಡಬೇಕು. ಬಜೆಟ್ ಪೂರ್ವದಲ್ಲಿ ವರದಿ ನೀಡುವಂತೆ ಸಿಎಂ ಹೇಳಿದ್ದರು. ಆದರೆ, ಬೇಸರದಿಂದ ಹೇಳುತ್ತೇನೆ, ಸಿಎಂ ಸೂಚನೆಯನ್ನು ನಡೆಸಿಕೊಳ್ಳಲು ಆಗುತ್ತಿಲ್ಲ. ಗ್ರಾಮ ಸಭೆ, ತಾಲೂಕು ಮಟ್ಟದ ಸಮಿತಿ ಸಭೆ, ಜಿಲ್ಲಾ ಮಟ್ಟದ ಸಭೆ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಬಹುತೇಕ ಜಿಲ್ಲೆಗಳಲ್ಲಿ ಸಭೆಗಳನ್ನೇ ಮಾಡದಿರುವುದು ಬೇಸರದ ಸಂಗತಿಯಾಗಿದೆ ಎಂದರು.




