ನವದೆಹಲಿ: ಭಾರತದ ಸೇನಾ ಸಾಮರ್ಥ್ಯ ಮತ್ತಷ್ಟು ಬಲಿಷ್ಠಗೊಳ್ಳಲಿದ್ದು, 800 ಕಿ.ಮೀ. ಸಾಮರ್ಥ್ಯದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಗಳು ಸೇರ್ಪಡೆಯಾಗಲಿವೆ.
ಈಗಾಗಲೇ ರಕ್ಷಣಾ ಮಂಡಳಿಯು ಸುಮಾರು 250 ಕ್ಷಿಪಣಿಗಳ ಖರೀದಿಗೆ ಒಪ್ಪಿಗೆ ನೀಡಿದ್ದು, ಅಂತಿಮ ಒಪ್ಪಿಗೆಗಾಗಿ ಭದ್ರತಾ ಸಮಿತಿಗೆ ಕಳುಹಿಸಲಾಗಿದೆ. ಭಾರತೀಯ ನೌಕಾಪಡೆ ಕೂಡ ಇದೇ ಮಾದರಿಯ ಕ್ಷಿಪಣಿಗಳನ್ನು ಖರೀದಿಸುತ್ತಿದೆ.
ಈ ಕ್ಷಿಪಣಿಗಳನ್ನು ಮರುಭೂಮಿ ಹಾಗೂ ಎತ್ತರದ ಪ್ರದೇಶಗಳಲ್ಲೂ ನಿಯೋಜಿಸಲಾಗುವುದು. ಈ ಕ್ಷಿಪಣಿಗಳು ಮೊದಲು 300 ಕಿ.ಮೀ ವ್ಯಾಪ್ತಿ ಹೊಂದಿದ್ದವು. ಆದರೆ ಈಗ ಅವುಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, 800 ಕಿ.ಮೀ ಗಿಂತಲೂ ಹೆಚ್ಚಿನ ದೂರದ ಗುರಿಗಳನ್ನೂ ನಾಶ ಮಾಡಬಲ್ಲವು.
ಬ್ರಹ್ಮೋಸ್ ಕ್ಷಿಪಣಿಯ ಬಹುತೇಕ ಭಾಗವನ್ನು ರಷ್ಯಾದಿಂದ ಉತ್ಪಾದಿಸಲಾಗುತ್ತದೆ. ಭಾರತವು ಈ ಶಸ್ತ್ರಾಸ್ತ್ರ ವ್ಯವಸ್ಥೆಯ ಪ್ರಮುಖ ಭಾಗಗಳನ್ನು ಸ್ವದೇಶೀಕರಣಗೊಳಿಸಲು ಪ್ರಯತ್ನಿಸುತ್ತಿದೆ. ಖಾಸಗಿ ವಲಯದ ಬೆಂಬಲದೊಂದಿಗೆ ಕೆಲವು ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಿದೆ.