ತುರುವೇಕೆರೆ : ಮನುಷ್ಯದ ದೇಹವು ಸಕ್ರಿಯವಾಗಿ ಕ್ರಮಬದ್ಧವಾಗಿ ಕಾರ್ಯನಿರ್ವಹಿಸಲು ಮೆದುಳಿನ ಆರೋಗ್ಯ ಬಹಳ ಮುಖ್ಯವಾಗಿದೆ. ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಒಳಗೊಂಡಿರುವ ಮೆದುಳು ದೇಹದ ಆಜ್ಞೆ ಮತ್ತು ನಿಯಂತ್ರಣ ಕೇಂದ್ರವಾಗಿದೆ ಎಂದು ಮೆದುಳು ತಜ್ಞೆ ಡಾ.ಪ್ರಿಯ ತಿಳಿಸಿದರು.
ರೋಟರಿ ಕ್ಲಬ್ ತುರುವೇಕೆರೆ, ರೋಟರಿ ಬೆಂಗಳೂರು ನಾರ್ತ್ವೆಸ್ಟ್, ಇ-ಕ್ಲಬ್ ಆಫ್ ಸಖಿ, ಓಯಸಿಸ್, ಕೊಲೋನವಾಲಾ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ತುಲೀಪ್ ಹೋಟೆಲ್ ನಲ್ಲಿ ನಡೆದ ಆರೋಗ್ಯಕರ ಮೆದುಳು, ಆರೋಗ್ಯವಂತ ಜೀವನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೆದುಳಿನ ಆರೋಗ್ಯ ಸುಧಾರಿಸಲು ಮತ್ತು ನಿರ್ವಹಿಸಲು ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ, ನಿರ್ಜಲೀಕರಣವನ್ನು ತಪ್ಪಿಸುವುದು ಮತ್ತು ತಲೆಗೆ ಯಾವುದೇ ಪೆಟ್ಟಾಗದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ ಎಂದರು.
ಮಾನಸಿಕ, ಬೌದ್ದಿಕ ಹಾಗೂ ದೈಹಿಕ ಚಟುವಟಿಕೆಯಲ್ಲಿ ಮೆದುಳಿನ ಕಾರ್ಯ ಬಹಳ ಪ್ರಮುಖವಾದುದಾಗಿರುವುದರಿಂದ ಮೆದುಳಿಗೆ ಒತ್ತಡವಾಗದಂತೆ ನೋಡಿಕೊಳ್ಳಬೇಕಿದೆ. ಮೆದುಳು ವಿಷಯ ಸಂಗ್ರಹಣೆ, ಸಂವಹನ ಶಕ್ತಿಯನ್ನು, ಅರಿವಿನ ಕೌಶಲ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತಲೆಗೆ ಪೆಟ್ಟಾಗಿ ಮೆದುಳಿಗೆ ಹಾನಿಯಾದರೆ ನೆನಪಿನ ಶಕ್ತಿ ಕುಂದುತ್ತದೆ, ಮರೆವಿನ ಕಾಯಿಲೆ ಉಂಟಾಗುತ್ತದೆ ಎಂದ ಅವರು, ಅತಿಯಾದ ಮಧ್ಯಪಾನ, ಧೂಮಪಾನ ಸಹ ಮೆದುಳಿನ ಸಂವಹನ ಮಾರ್ಗಗಳನ್ನು ಅಡ್ಡಿಪಡಿಸಿ, ನರಮಂಡಲ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ, ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡುವುದರಿಂದ ಮೆದುಳಿನ ಆರೋಗ್ಯ ಉತ್ತಮವಾಗಿರುವಂತೆ ಕಾಪಾಡಿಕೊಳ್ಳಬಹುದಾಗಿದೆ. ಆದರೆ ನಿಷ್ಕ್ರಿಯ ಜೀವನಶೈಲಿ ಮೆದುಳನ್ನು ಕ್ರಿಯಾತ್ಮಕ ಚಟುವಟಿಕೆಯಿಂದ ದೂರಮಾಡಿ ಆತಂಕ, ಖಿನ್ನತೆಯಂತಹ ಸಮಸ್ಯೆಯನ್ನು ಉಂಟು ಮಾಡಿ ನಕಾರಾತ್ಮಕ ಯೋಚನೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ತುರುವೇಕೆರೆ ಅಧ್ಯಕ್ಷ ವಿ.ಆರ್.ಉಮೇಶ್, ರೋಟರಿ ನಾರ್ತ್ವೆಸ್ಟ್ ಅಧ್ಯಕ್ಷೆ ಲಕ್ಷ್ಮೀ ಅಚ್ಯುತ, ಕಾರ್ಯದರ್ಶಿ ಸಚಿನ್ ಕಾಂಬ್ಳೆ, ನಿರ್ದೇಶಕರಾದ ರಮ್ಯಾಕಾಂಬ್ಳೆ, ಪ್ರತಾಪ್ ಉಜ್ಜಿನಿ, ಮುಧುರ ಉಜ್ಜಿನಿ, ಹೇಮಾ ಸೇರಿದಂತೆ ವಿವಿಧ ರೋಟರಿ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




