ಶಿವಮೊಗ್ಗ: ಮುಡಾ ಹಗರಣದ ತೀರ್ಪು ನಾಳೆ ಬರಲಿದೆ. ನ್ಯಾಯಾಲಯ ಈ ತೀರ್ಪನ್ನು ನೀಡುವುದಕ್ಕಿಂತಲೂ ಮೊದಲೇ ಸಿದ್ದರಾಮಯ್ಯ ಗೌರವಯುತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳ್ಳೆಯದು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ನಾಳೆ ನ್ಯಾಯಾಲಯದಲ್ಲಿ ತೀರ್ಪು ಬಂದ ನಂತರ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಪರಿಸ್ಥಿತಿ ನೂರಕ್ಕೆ ನೂರರಷ್ಟು ಬರುತ್ತದೆ.
ಅವರು ಮಾಡಿರುವ ಎಲ್ಲಾ ಹಗರಣಗಳು ಸಾಬೀತಾಗಿರುವುದರಿಂದ ಅವರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈಗ ನಾವು ಸಿದ್ದರಾಮಯ್ಯ ವಿರುದ್ಧ ಯಾವುದೇ ಹೋರಾಟ ಮಾಡುವುದಿಲ್ಲ. ನ್ಯಾಯಾಲಯದಲ್ಲಿ ತೀರ್ಪು ಅಂತಿಮ ಹಂತಕ್ಕೆ ಬಂದಿರುವುದರಿಂದ ಸಹಜವಾಗಿ ಸಿಎಂ ಅವರೇ ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತದೆ ಎಂದರು.
ಕೋವಿಡ್ ಹಗರಣ ಸಂಬಂಧ ಬಿಜೆಪಿ ನಾಯಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಸರ್ಕಾರ ತೀರ್ಮಾನ ತೆಗೆದುಕೊಂಡಿರುವ ಬಗ್ಗೆ ಮಾತನಾಡಿದ ಬಿಎಸ್‌ವೈ, ಈ ವಿಚಾರದಲ್ಲಿ ಅರ್ಥ ಇಲ್ಲ. ಸರ್ಕಾರ ಏನು ಬೇಕಾದರೂ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರವಾಗಿದೆ. ಅವರು ಏನು ಬೇಕಾದರೂ ಕ್ರಮ ಕೈಗೊಳ್ಳಲಿ. ಕಾನೂನು ರೀತಿಯಲ್ಲಿ ಎದುರಿಸೋಣ ಎಂದು ಹೇಳಿದರು.