ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಮಂಡಿಸಿರುವ ಕೇಂದ್ರ ಬಜೆಟ್ ಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸ್ಪೂರ್ತಿಯಾಗಿದೆ ಎಂದು ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ತೀವ್ರ ಹಿನ್ನೆಡೆ ಅನುಭವಿಸಿದ ಬಳಿಕ ಬಿಜೆಪಿ ಮತ್ತು ಎನ್.ಡಿ.ಎ.ಗೆ ಬುದ್ಧಿ ಬಂದಿದೆ.
ಕಾಂಗ್ರೆಸ್ ಪಕ್ಷ ತನ್ನ ಲೋಕಸಭಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಯುವಕರಿಗೆ ಅಪ್ರೆಂಟಿಷಿಪ್ ನೀಡುವ ಯೋಜನೆ ಸೇರಿದಂತೆ ಹಲವು ಅಂಶಗಳನ್ನು ಅಳವಡಿಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿಯ ಕೆಟ್ಟ ನೀತಿಗಳಿಂದಾಗಿ ದೇಶದಲ್ಲಿ 45 ವರ್ಷದಲ್ಲೇ ಕಂಡು ಕೇಳರಿಯದ ನಿರುದ್ಯೋಗ ಸಮಸ್ಯೆ ಉಂಟಾಗಿತ್ತು. ಕಳೆದ 10 ವರ್ಷಗಳ ಕಾಲ ನಿರುದ್ಯೋಗ ಸಮಸ್ಯೆ ಬಗ್ಗೆ ಗಮನವನ್ನೇ ಹರಿಸದಿದ್ದ ಕೇಂದ್ರ ಸರ್ಕಾರ ಈ ಬಜೆಟ್ ನಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.
ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬ ಗಾದೆಯಂತೆ ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಸಿಂಹಪಾಲು ಹಾಗೂ ಎನ್.ಡಿ.ಎ. ಸರ್ಕಾರ ಇರುವ ರಾಜ್ಯಗಳಿಗೆ ಆದ್ಯತೆ ನೀಡಿ, ಇತರ ರಾಜ್ಯಗಳನ್ನು ಕಡೆಗಣಿಸಲಾಗಿದ್ದು, ಈ ಬಜೆಟ್ ತಾರತಮ್ಯದಿಂದ ಕೂಡಿದೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದೂ ಈಶ್ವರ ಖಂಡ್ರೆ ಹೇಳಿದ್ದಾರೆ. ಕರ್ನಾಟಕಕ್ಕೆ ನೀಡಿರುವ ಕೊಡುಗೆ ಏನು ಎಂದೂ ಪ್ರಶ್ನಿಸಿದ್ದಾರೆ.