ತುರುವೇಕೆರೆ: ವೇತನ ಪರಿಷ್ಕರಣೆ, ಹೆಚ್ಚುವರಿ ವೇತನ ಬಾಕಿ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳಿಗೆ ಪಟ್ಟು ಹಿಡಿದಿರುವ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಇಂದಿನಿಂದ ಕೈಗೊಂಡಿರುವ ಬಸ್ ಮುಷ್ಕರ ತುರುವೇಕೆರೆಯಲ್ಲಿ ಭಾಗಶಃ ಯಶಸ್ವಿಯಾಗಿದೆ. ನಾಗರೀಕರು, ಮಹಿಳೆಯರು, ವಿದ್ಯಾರ್ಥಿಗಳ ಪರದಾಟ ನೋಡಲಾರದೆ ಕೆಲವು ನೌಕರರು ಬಸ್ ಚಾಲನೆ ಮಾಡಿ ಮುಷ್ಕರದ ನಡುವೆಯೂ ಸೇವೆಯಲ್ಲೂ ನಿರತರಾಗಿದ್ದುದು ವಿಶೇಷವಾಗಿತ್ತು.
ಗ್ರಾಮೀಣ ಪ್ರದೇಶದಿಂದ ಪಟ್ಟಣದ ಶಾಲಾ ಕಾಲೇಜಿಗೆ ತೆರಳಲು ಬಂದಿದ್ದ ವಿದ್ಯಾರ್ಥಿಗಳು ಹಾಗೂ ಪರಸ್ಥಳಗಳಿಗೆ ಉದ್ಯೋಗಕ್ಕೆ ಹಾಗೂ ಇನ್ನಿತರ ಕೆಲಸಕ್ಕೆ ಬಂದಿದ್ದ ನಾಗರೀಕರು ಬಸ್ ನಿಲ್ದಾಣದಲ್ಲಿ ಬಸ್ ದೊರೆಯದೆ ಕೆಲಕಾಲ ಪರದಾಡುವಂತಾಯಿತು. ತಿಪಟೂರು, ಹೊಸದುರ್ಗ, ತುಮಕೂರು, ಮೈಸೂರು, ಬೆಂಗಳೂರು, ಕಲ್ಲೂರು ಕ್ರಾಸ್, ಸಂಪಿಗೆ, ಕೆ.ಬಿ.ಕ್ರಾಸ್ ಸೇರಿದಂತೆ ಹಲವು ಮಾರ್ಗಗಳಿಗೆ ಬಸ್ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ಕಳಿಸುವಲ್ಲಿ ಸಾರಿಗೆ ಸಂಸ್ಥೆಯ ಡಿಟಿಒ ಮಂಜುನಾಥ್, ಘಟಕ ವ್ಯವಸ್ಥಾಪಕ ತಮ್ಮಯ್ಯ ಹಾಗೂ ಇಲಾಖಾ ಸಿಬ್ಬಂದಿಗಳು ಯಶಸ್ವಿಯಾದರು.
ಬಸ್ ಮುಷ್ಕರದ ಬಿಸಿ ಪ್ರಯಾಣಿಕರನ್ನು ಸಾಕಷ್ಟು ಕಂಗೆಡಿಸಿತು. ಅದರಲ್ಲೂ ಉಚಿತ ಪ್ರಯಾಣದ ಸಿಹಿ ಅನುಭವಿಸುತ್ತಿರುವ ಮಹಿಳಾ ಪ್ರಯಾಣಿಕರು ಖಾಸಗಿ ವಾಹನಗಳಿಗೆ ಹತ್ತಲು ಯೋಚಿಸಿ, ಸಂಚಾರ ನಿಯಂತ್ರಕರ ಬಳಿ ಬಂದು ತಮ್ಮೂರಿನ ಬಸ್ ಕಳಿಸಿ ಎಂದು ಕೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತಿಪಟೂರಿನ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ತಿಪಟೂರು ಮಾರ್ಗಕ್ಕೆ ಎರಡು-ಮೂರು ಬಸ್ ಬೆಳಿಗ್ಗೆ ಶಾಲಾಕಾಲೇಜಿನ ವೇಳೆಗೆ ಕಳಿಸಲಾಯಿತು.

ಮೌಲಾನಾ ಆಜಾದ್ ಶಾಲೆಯ ಸುಮಾರು 25 ಕ್ಕೂ ಅಧಿಕ ಮಕ್ಕಳು ಸಂಪಿಗೆ ಮಾರ್ಗದವರಾಗಿದ್ದು, ಮುಷ್ಕರದ ಹಿನ್ನೆಲೆ ಶಾಲೆಗೆ ರಜೆ ನೀಡಿ ಮಕ್ಕಳನ್ನು ಊರಿಗೆ ತೆರಳಲು ಶಿಕ್ಷಕರು ಕಳಿಸಿಕೊಟ್ಟಿದ್ದರು. ಆದರೆ ಬಸ್ ಇಲ್ಲದ ಕಾರಣ ಮಕ್ಕಳು ಕೆಲಕಾಲ ನಿಲ್ದಾಣದಲ್ಲೇ ಉಳಿಯುವಂತಾಯಿತು. ಒಂದೇ ಮಾರ್ಗದ ವಿವಿಧ ಗ್ರಾಮಗಳ ವಿದ್ಯಾರ್ಥಿಗಳಾಗಿದ್ದ ಕಾರಣ ವಿದ್ಯಾರ್ಥಿಗಳು ಮನೆಗೆ ತಲುಪಲು ಅನುಕೂಲ ಮಾಡಿಕೊಡಲು ಸಂಪಿಗೆ ಮಾರ್ಗಕ್ಕೆ ಪ್ರಯಾಣಿಕರು ಸಿಗದಿದ್ದರೂ ಮಕ್ಕಳನ್ನು ಅವರ ಊರಿಗೆ ತಲುಪಿಸಿ ಎಂದು ಘಟಕ ವ್ಯವಸ್ಥಾಪಕರು ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದು ವಿಶೇಷವಾಗಿ ಗಮನಸೆಳೆಯಿತು.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಸ್ ಸಂಚಾರದಲ್ಲಿ ಅಲ್ಪ ಪ್ರಮಾಣದಲ್ಲಿ ವ್ಯತ್ಯಯವಾದರೂ ಸಹ ಪ್ರಯಾಣಿಕರಿಗಾಗಿ ಕೆಲವು ಮಾರ್ಗಗಳಲ್ಲಿ ಬಸ್ ಸಂಚರಿಸಿದವು. ಮಧ್ಯಾಹ್ನದ ನಂತರ ಬಸ್ ಸಂಚಾರದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿತು. ಚಾಲಕರು, ನಿರ್ವಾಹಕರು ಸಂಚಾರದ ವೇಳೆ ಅನಾಹುತ ಸಂಭವಿಸಿದರೆ ಯಾರು ಜವಾಬ್ದಾರಿ? ಬಸ್ಸು ಸಂಚರಿಸುವಾಗ ಕೆಲವರು ನಮ್ಮನ್ನು ಮುಷ್ಕರದಲ್ಲಿ ಪಾಲ್ಗೊಳ್ಳದೆ ಕರ್ತವ್ಯಕ್ಕೆ ಹೋಗಿದ್ದೀರಿ ಎಂದು ನಿಂದಿಸುತ್ತಾರೆ, ಆ ಮಾತುಗಳನ್ನು ನಮ್ಮಿಂದ ಕೇಳಲು ಸಾಧ್ಯವಿಲ್ಲ, ಕರ್ತವ್ಯಕ್ಕೆ ಹೋಗುವುದು ಹೇಗೆ? ಎಂದು ಘಟಕ ವ್ಯವಸ್ಥಾಪಕರ ಬಳಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದರು.
ನಾಗರೀಕರಿಗೆ ಅಗತ್ಯ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವುದಕ್ಕಾಗಿ ಬೆಳಿಗ್ಗೆಯಿಂದಲೇ ಬಸ್ ನಿಲ್ದಾಣದಲ್ಲಿ ಡಿಟಿಒ ಮಂಜುನಾಥ್, ಡಿಪೋ ಮ್ಯಾನೇಜರ್ ತಮ್ಮಯ್ಯ, ಸೆಕ್ಯೂರಿಟಿ ಹವಾಲ್ದಾರ್ ಸೀನಪ್ಪ, ಸಂಚಾರ ನಿಯಂತ್ರಕರಾದ ಪ್ರತಿಮಾ, ಕೆಂಪರಾಜು ಚಾಲಕ ನಿರ್ವಾಹರಕ ಮನವೊಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡುವಲ್ಲಿ ಶ್ರಮಿಸಿದರು.
ಘಟಕ ವ್ಯವಸ್ಥಾಪಕ ತಮ್ಮಯ್ಯ ಮಾತನಾಡಿ, ತುರುವೇಕೆರೆ ಸಾರಿಗೆ ಡಿಪೋದಲ್ಲಿ ಚಾಲಕರು 96, ನಿರ್ವಾಹಕರು 27, ಚಾಲಕ ಕಂ ನಿರ್ವಾಹಕರು 194 ಮಂದಿ ಇದ್ದು, ಈ ದಿನ 56 ಮಾರ್ಗಗಳ ಸಂಚರಿಸಬೇಕಿದೆ. ಮುಷ್ಕರದ ನಡುವೆಯೂ ಈ ದಿನ 54 ಮಾರ್ಗಗಳಿಗೆ ಬಸ್ ಸಂಚರಿಸಿದೆ. ಚಾಲಕ ಹಾಗೂ ನಿರ್ವಾಹಕರು ನಾಗರೀಕರಿಗಾಗಿ ಬಸ್ ಸಂಚಾರ ಮಾಡಿರುವುದು ಖುಷಿಯ ಸಂಗತಿಯಾಗಿದೆ. ಬೇಡಿಕೆ ಈಡೇರಿಕೆಗೆ ಸರ್ಕಾರವನ್ನು ನೌಕರರು ಒತ್ತಾಯಿಸುತ್ತಿದ್ದಾರೆ. ನಿಗಮಗಳ ಸಂಘಟನೆಗಳು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿವೆ. ಉಚ್ಛ ನ್ಯಾಯಾಲಯ ಸಹ ಒಂದು ದಿನ ಕಾಲಾವಕಾಶ ಕೋರಿದೆ. ಮುಂದಿನ ದಿನಗಳಲ್ಲಿ ನೌಕರರಿಗೆ ಒಳ್ಳೆಯದಾಗಲಿದೆ. ಸಾರಿಗೆ ಸಂಸ್ಥೆ ನಾಗರೀಕರ ಸೇವೆಗಾಗಿ ಇದೆ, ಆದ್ದರಿಂದ ನೌಕರರು ನಾಗರೀಕರ ಸೇವೆಗಾಗಿ ಕರ್ತವ್ಯಕ್ಕೆ ಹಾಜರಾಗಬೇಕೆನ್ನುವುದು ನನ್ನ ಆಶಯವಾಗಿದೆ ಎಂದರು.
ವರದಿ: ಗಿರೀಶ್ ಕೆ ಭಟ್




