ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಯ ತಿರುವಿನಲ್ಲಿ ವರ್ಷಗಳಿಂದ ಹದಗೆಟ್ಟು ಹೋಗಿದ್ದ ರಸ್ತೆಯನ್ನು ಕೊನೆಗೂ ಸರಿಪಡಿಸಿ ನಾಗರೀಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಸ್ಥಳೀಯ ಪಟ್ಟಣ ಪಂಚಾಯ್ತಿ ಹಾಗೂ ಲೋಕೋಪಯೋಗಿ ಇಲಾಖೆ ಮುಂದಾಗಿದೆ.

ರಸ್ತೆ ತಿರುವಿನಲ್ಲಿದ್ದು ಹದಗೆಟ್ಟಿದ್ದ ಸೇತುವೆ ಸರಿಪಡಿಸುವಂತೆ ಬಿವಿ 5 ನ್ಯೂಸ್ ಮೇ 22 ರಂದು ದಬ್ಬೇಘಟ್ಟ ವೃತ್ತದ ತಿರುವಿನಲ್ಲಿ ಹದಗೆಟ್ಟ ರಸ್ತೆ, ತಾಲ್ಲೂಕು ಆಡಳಿತ ನಿರ್ಲಕ್ಷ್ಯ : ಹೆಣ ಬೀಳುವ ಮುನ್ನ ರಸ್ತೆ ಸರಿಪಡಿಸುವಂತೆ ನಾಗರೀಕರ ಆಗ್ರಹ ಎಂಬ ಶೀರ್ಷಿಕೆಯಡಿ ವಿಸೃತ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸ್ಥಳೀಯ ಪಟ್ಟಣ ಪಂಚಾಯ್ತಿ ಹಾಗೂ ಲೋಕೋಪಯೋಗಿ ಇಲಾಖೆ ದಬ್ಬೇಘಟ್ಟ ರಸ್ತೆ ತಿರುವಿನಲ್ಲಿ ಹಾಳಾಗಿದ್ದ ಚರಂಡಿಯನ್ನು ದುರಸ್ಥಿಗೊಳಿಸಿ ಸೇತುವೆ ನಿರ್ಮಾಣ ಮಾಡಲು ಮುಂದಾಗಿದೆ.

ದಬ್ಬೇಘಟ್ಟ ರಸ್ತೆ ಅಗಲೀಕರಣ ಸಂದರ್ಭದಲ್ಲೇ ಈ ಸೇತುವೆ ಕಾರ್ಯ ಆಗಬೇಕಿತ್ತಾದರೂ ಆಗಿರಲಿಲ್ಲ. ವಾರಕ್ಕೊಮ್ಮೆ ಭಾರೀ ವಾಹನಗಳ ಸಂಚಾರದಿಂದ ಚರಂಡಿ ಮೇಲಿದ್ದ ಚಪ್ಪಡಿ ಕಲ್ಲುಗಳು ಕುಸಿದು ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದಲ್ಲದೆ ರಸ್ತೆ ತಿರುವಿನಲ್ಲಿ ಸಂಚರಿಸುವಾಗ ವಾಹನ ಸವಾರರು ಬಿದ್ದು ಗಾಯಗೊಂಡಿದ್ದರು. ಈ ರಸ್ತೆಯನ್ನು ಯಾರು ಸರಿಪಡಿಸಬೇಕೆಂಬ ಜಿಜ್ಞಾಸೆ ಪಟ್ಟಣ ಪಂಚಾಯ್ತಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಲ್ಲಿ ಉಂಟಾಗಿತ್ತು. ಇದು ನಮ್ಮ ಇಲಾಖೆ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಎರಡೂ ಇಲಾಖೆಗಳು ಪರಸ್ಪರ ಕೈ ತೋರಿಸಿ ಸುಮ್ಮನಿದ್ದವು. ಆದರೆ ಪತ್ರಿಕೆ ವರದಿ ಬಂದ ನಂತರ ಪಟ್ಟಣ ಪಂಚಾಯ್ತಿ ಹಾಗೂ ಲೋಕೋಪಯೋಗಿ ಇಲಾಖೆ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದೆ.
ವಾಸ್ತವವಾಗಿ ಮಹಾನಗರ, ನಗರ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಸಾಗುವ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವ ಹಾಗೂ ನಿರ್ವಹಿಸುವ ಕುರಿತು ಲೋಕೋಪಯೋಗಿ ಇಲಾಖೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು 2013 ರ ಅಕ್ಟೋಬರ್ 03 ರಂದು ಕಳಿಸಿರುವ ಪತ್ರದನ್ವಯ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ನಿರ್ವಹಣೆಯಾಗಲೀ ಅಥವಾ ನಿರ್ಮಾಣ ಕಾಮಗಾರಿಗಳಾಗಲೀ ಲೋಕೋಪಯೋಗಿ ಇಲಾಖೆ ಕೈಗೊಳ್ಳಬಾರದು ಎಂದು ತಿಳಿಸಿದ್ದಾರೆ. ಅದರಂತೆ ತುರುವೇಕೆರೆ ತಾಲ್ಲೂಕಿನ ಬೋಚಿಹಳ್ಳಿ, ತುರುವೇಕೆರೆ ದಬ್ಬೇಗಟ್ಟ ರಸ್ತೆಯ ತುರುವೇಕೆರೆ ಪಟ್ಟಣದಿಂದ ಹೊಸ ನ್ಯಾಯಾಲಯದ ಸಂಕೀರ್ಣದವರೆಗೆ 1.80 ಕಿ.ಮೀ ರಸ್ತೆಯು ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟಿದ್ದು ಈ ಭಾಗದ ರಸ್ತೆಯನ್ನು ಸ್ಥಳೀಯ ಪಟ್ಟಣ ಪಂಚಾಯ್ತಿಗೆ ಹಸ್ತಾಂತರಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗೆ 2014ರ ಮೇ 29ರಂದೇ ಪತ್ರ ರವಾನಿಸಿದ್ದರು. ಆದರೂ ಸಹ ರಸ್ತೆಯಲ್ಲಿನ ಸೇತುವೆ ದುರಸ್ಥಿ ಬಗ್ಗೆ ಗೊಂದಲ ಏರ್ಪಟ್ಟು ರಸ್ತೆ ದುರಸ್ಥಿ ಮತ್ತು ಸೇತುವೆ ನಿರ್ಮಾಣ ಕಾರ್ಯ ಆಗಿರಲಿಲ್ಲ.
ಈಗ ಬಿವಿ 5 ನ್ಯೂಸ್ ವರದಿ ನಂತರ ಶಾಸಕ ಎಂ.ಟಿ.ಕೃಷ್ಣಪ್ಪನವರ ಸೂಚನೆ ಮೇರೆಗೆ ಎರಡೂ ಇಲಾಖೆಗಳು ಕೈಜೊಡಿಸಿ ರಸ್ತೆ ತಿರುವಿನಲ್ಲಿರುವ ಸೇತುವೆ ದುರಸ್ಥಿ ಕಾರ್ಯ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣ, ಎರಡೂ ಬದಿ ಚರಂಡಿ ನಿರ್ಮಾಣ ಮಾಡಲು ಸುಮಾರು 20 ಲಕ್ಷ ರೂಗಳ ನೀಲನಕ್ಷೆ ತಯಾರಿಸಿ ಇಲಾಖಾ ಅನುಮತಿಗೆ ಲೋಕೋಪಯೋಗಿ ಇಲಾಖೆ ಪತ್ರ ರವಾನಿಸಿದೆ. ಸೇತುವೆ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ನಾಗರೀಕರು ಬಿವಿ 5 ನ್ಯೂಸ್ ಧನ್ಯವಾದ ತಿಳಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್




