ಚಾಮರಾಜನಗರ : ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಜಾತಿ ಗಣತಿ ವರದಿ ವಿಚಾರವಾಗಿ ಚರ್ಚಿಸಲು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು (ಏ.24) ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.
ಈಗಾಗಲೇ ಜಿಲ್ಲಾಧಿಕಾರಿ ಶಿಲ್ಪಾನಾಗ್ ನೇತೃತ್ವದಲ್ಲಿ ಮಹದೇಶ್ವರ ಬೆಟ್ಟದಲ್ಲಿ ಭರ್ಜರಿ ತಯಾರಿ ನಡೆಸಲಾಗಿದ್ದು, ಡಿಸಿ ಮತ್ತು ಹನೂರು ಶಾಸಕ ಎಂ.ಆರ್.ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಮಾದಪ್ಪನ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು ಎಂದು ಸರ್ಕಾರ ಈ ಹಿಂದೆ ಮೂರು ಬಾರಿ ನಿರ್ಧರಿಸಿತ್ತು. ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಇಂದು ಮಧ್ಯಾಹ್ನ 12 ಗಂಟೆಗೆ ಬೆಟ್ಟದ ದೀಪದ ಗಿರಿ ವಡ್ಡುವಿನಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ.
ಸಭೆಯಲ್ಲಿ ಜಾತಿಗಣತಿ ವರದಿ ಕುರಿತಾಗಿ ಸಚಿವರ ಅಭಿಪ್ರಾಯಗಳನ್ನು ಸಿಎಂ ಪಡೆಯಲಿದ್ದು, ಮೇ.2ರಂದು ಅಂತಿಮವಾಗಿ ಈ ಬಗ್ಗೆ ನಿರ್ಧರಿಸಲು ಸರ್ಕಾರ ಸಜ್ಜಾಗಿದೆ. ಮಾದಪ್ಪನ ಬೆಟ್ಟದಲ್ಲಿ ನಡೆಯಲಿರುವ ಈ ಸಚಿವ ಸಂಪುಟ ಸಭೆಯಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ಚಿಕ್ಕಮಗಳೂರು, ಉಡುಪಿ, ಮಂಗಳೂರು ಮತ್ತು ಹಾಸನ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಕುರಿತಂತೆ ಮಹತ್ವದ ಪ್ರಸ್ತಾವನೆಗಳು ಚರ್ಚೆಗೆ ಬರಲಿವೆ ಎಂದು ತಿಳಿದುಬಂದಿದೆ.