ಬೆಂಗಳೂರು : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ತನಿಖೆಗೆ ಅನುಮತಿಗೆ ಪಡೆಯಲು ಮರು ಮನವಿಗೆ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯು ನಿರ್ಧಾರ ಕೈಗೊಂಡಿದೆ.
ಈ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರು ಮಾಹಿತಿ ನೀಡಿದ್ದು, ಈ ಮೊದಲು ತನಿಖೆಗಾಗಿ ಕೋರಿದ್ದ ರಾಜ್ಯ ಸರ್ಕಾರದ ಮನವಿಯನ್ನು ಗವರ್ನರ್ ಅವರು ತಿರಸ್ಕರಿಸಿದ್ದರು.ಇದೀಗ ಮತ್ತೊಮ್ಮೆ ಮನವಿ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
2020, ನ.19ರಂದು ಟಿ.ಜೆ. ಅಬ್ರಾಹಂ ಅವರು ಎಸಿಎಬಿಗೆ ದೂರು ನೀಡಿದ್ದರು. ಪಿಎಂಎಲ್ ಕಾಯ್ದೆ ಅಡಿ ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು. ಭ್ರಷ್ಟಾಚಾರದ ಗಂಭೀರ ಆರೋಪ ಯಡಿಯೂರಪ್ಪರ ಕುಟುಂಬದ ಮೇಲೆ ಕೇಳಿಬಂದಿತ್ತು. ಅಬ್ರಾಹಂ ದೂರು ನೀಡಿದ್ದರು, ತನಿಖೆ ಮಾಡಿಸುವಂತೆ ರಾಜ್ಯಪಾಲರ ಬಳಿ ಮನವಿ ಮಾಡಿದ್ದರು.
ಆದರೆ ರಾಜ್ಯಪಾಲರು ಅನುಮತಿಯನ್ನು ನಿರಾಕರಸಿದ್ದರು ಎಂದು ಹೆಚ್ಕೆ ಪಾಟೀಲರು ಹೇಳಿದರು. ಇನ್ನು ರಾಜ್ಯಪಾಲರ ನಿರ್ಣಯವನ್ನು ಹಿಂಪಡೆದು, ಪುನರ್ ಪರಿಶೀಲನೆ ಮಾಡಿ, ತನಿಖೆಗೆ ಅನುಮತಿ ನೀಡಲು ಕ್ಯಾಬಿನೆಟ್ ಶಿಫಾರಸು ಮಾಡಿದ್ದು, ರಾಜ್ಯಪಾಲರಿಗೆ ಪತ್ರ ಬರೆಯಲು ಸರ್ಕಾರ ನಿರ್ಧಾರಿದೆ ಎಂದರು.