ಬಹುಭಾಷಾ ನಟಿ ನಯನತಾರಾ ಅವರು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ದಕ್ಷಿಣ ಚಿತ್ರರಂಗದಲ್ಲಿ ತಮ್ಮದೇ ಹವಾ ಸೃಷ್ಟಿಸಿರುವ ನಯನತಾರಾ ಅವರು ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುತ್ತಿದ್ದಾರೆ. ಏಕೆಂದರೆ ಸೂಪರ್ ಸ್ಟಾರ್ ನಟರು ಈಗಾಗಲೇ ಹಲವರಿದ್ದಾರೆ. ಆದರೆ, ನಟಿಯರ ಪೈಕಿ ಸೂಪರ್ ಸ್ಟಾರ್‌ಗಳಿಗೆ ಸೆಡ್ಡು ಹೊಡೆಯುವ ನಯನತಾರಾ ಲೇಡಿ ಸೂಪರ್ ಸ್ಟಾರ್ ಆಗಿದ್ದಾರೆ. ಈಗ ಇದ್ದಕ್ಕಿಂದ್ದಂತೆ ನಟಿ ತನ್ನ ಹೆಸರು ಅದಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇಷ್ಟಕ್ಕೂ ನಯನತಾರಾ ಅವರು ತಮ್ಮ ಹೆಸರಿನ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ನಯನತಾರಾ ಅವರನ್ನು ಸದ್ಯ ಎಲ್ಲರೂ ಲೇಡಿ ಸೂಪರ್‌ಸ್ಟಾರ್ ಎಂದೇ ಕರೆಯುತ್ತಿದ್ದಾರೆ. ಆದರೆ, ಈ ಹೆಸರು ಖುದ್ದು ನಯನತಾರಾ ಅವರಿಗೇ ಇಷ್ಟವಿಲ್ಲವಂತೆ. ಈ ವಿಚಾರವನ್ನು ಅವರೇ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ.
ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡುವ ಮೂಲಕ ಮನವಿ ಕೂಡ ಮಾಡಿಕೊಂಡಿದ್ದಾರೆ. ಹಾಗಾದ್ರೆ ನಯನತಾರಾ ಹೇಳಿದ್ದೇನು ಗೊತ್ತಾ? ʼನಿಮ್ಮಲ್ಲಿ ಅನೇಕರು ನನ್ನನ್ನು ಲೇಡಿ ಸೂಪರ್‌ಸ್ಟಾರ್ ಎಂದು ಪ್ರೀತಿಯಿಂದ ಕರೆಯುತ್ತಿದ್ದೀರಿ. ಇದು ನಿಮ್ಮ ಅಪಾರ ಪ್ರೀತಿಯಿಂದ ಹುಟ್ಟಿರುವ ಟೈಟಲ್. ಅಂತಹ ಅಮೂಲ್ಯವಾದ ಬಿರುದನ್ನು ನನ್ನ ಮುಡಿಗೇರಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಚಿರಋಣಿ.
ಆದರೆ ನನ್ನನ್ನು ನೀವೆಲ್ಲ ‘ನಯನತಾರಾ’ ಎಂದೇ ಕರೆಯಿರಿ. ನಿಮ್ಮೆಲ್ಲರಿಗೂ ವಿನಮ್ರವಾಗಿ ನಾನು ವಿನಂತಿಸುತ್ತೇನೆʼ ಎಂದು ನಯನತಾರಾ ಹೇಳಿದ್ದಾರೆ. ನನ್ನ ಜೀವನವು ತೆರೆದ ಪುಸ್ತಕವಾಗಿದೆ. ಅದು ಯಾವಾಗಲೂ ನಿಮ್ಮ ಬೇಷರತ್ತಾದ ಪ್ರೀತಿ ಮತ್ತು ವಾತ್ಸಲ್ಯದಿಂದ ಕೂಡಿದೆ. ನನ್ನ ಯಶಸ್ಸಿನ ಸಮಯದಲ್ಲಿ ಅದು ನನ್ನ ಭುಜದ ಮೇಲೆ ತಟ್ಟುತ್ತಾ, ಕಷ್ಟದ ಸಮಯದಲ್ಲಿ ನನ್ನನ್ನು ಮೇಲೆತ್ತಲು ನಿಮ್ಮ ಕೈಯನ್ನು ಚಾಚಿದ್ದೀರಿ. ನೀವು ಯಾವಾಗಲೂ ನನ್ನೊಂದಿಗೆ ಇದ್ದೀರಿ ಎಂದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ನನ್ನ ಹೆಸರು ಹೃದಯಕ್ಕೆ ಹತ್ತಿರದಲ್ಲಿದೆ ಎಂದು ನಾನು ಭಾವಿಸುತ್ತೇನೆ. ಇದು ನಾನು ಯಾರೆಂಬುದನ್ನು ಪ್ರತಿನಿಧಿಸುತ್ತದೆʼ ಎಂದು ನಯನತಾರಾ ಒತ್ತಿ ಹೇಳಿದ್ದಾರೆ. ನಯನತಾರಾ ಯಾವಾಗಲೂ ನಯನತಾರಾ ಮಾತ್ರ! ತನ್ನ ವೈರಲ್ ಪೋಸ್ಟ್‌ನ ಕೊನೆಯಲ್ಲಿ ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ʼಆದರೂ ನನ್ನನ್ನು ‘ನಯನತಾರಾ’ ಎಂದೇ ಕರೆಯಿರಿ ಎಂದು ವಿನಮ್ರವಾಗಿ ಕೇಳಿಕೊಳ್ಳುತ್ತೇನೆ. ಏಕೆಂದರೆ ಈ ಹೆಸರು ನನ್ನ ಹೃದಯಕ್ಕೆ ಹತ್ತಿರದಲ್ಲಿದೆ ಎಂದು ನಾನು ಭಾವಿಸುತ್ತೇನೆ. ಒಬ್ಬ ನಟಿಯಾಗಿ ಮಾತ್ರವಲ್ಲದೆ, ಒಬ್ಬ ವ್ಯಕ್ತಿಯಾಗಿ ನಾನು ಯಾರೆಂಬುದನ್ನು ಇದು ಪ್ರತಿನಿಧಿಸುತ್ತದೆ. ಶೀರ್ಷಿಕೆಗಳು ಮತ್ತು ಪುರಸ್ಕಾರಗಳು ಅಮೂಲ್ಯವಾದವು. ಆದರೆ ಅವು ಕೆಲವೊಮ್ಮೆ ನಮ್ಮ ಕೆಲಸ, ನಮ್ಮ ಕೌಶಲ್ಯ ಹಾಗೂ ನಾವು ನಿಮ್ಮೊಂದಿಗೆ ಹಂಚಿಕೊಳ್ಳುವ ಬಂಧದಿಂದ ನಮ್ಮನ್ನು ಪ್ರತ್ಯೇಕಿಸಬಹುದುʼ ಎಂದಿದ್ದಾರೆ. ʼನಾವೆಲ್ಲರೂ ಪ್ರೀತಿಯ ಭಾಷೆಯನ್ನು ಹಂಚಿಕೊಳ್ಳುತ್ತೇವೆ ಎಂದು ನಾನು ನಂಬುತ್ತೇನೆ. ಅದು ನಮ್ಮನ್ನು ಎಲ್ಲಾ ಮಿತಿಗಳನ್ನು ಮೀರಿ ಸಂಪರ್ಕದಲ್ಲಿರಿಸುತ್ತದೆ. ನಮ್ಮೆಲ್ಲರಿಗೂ ಭವಿಷ್ಯವು ಅನಿರೀಕ್ಷಿತವಾಗಿದ್ದರೂ, ನಿಮ್ಮ ಮರೆಯಾಗದ ಬೆಂಬಲವು ನಿರಂತರವಾಗಿ ಉಳಿಯುತ್ತದೆ ಎಂದು ನನಗೆ ತುಂಬಾ ಸಂತೋಷವಾಗಿದೆ. ನಿಮ್ಮನ್ನು ಮನರಂಜಿಸಲು ನನ್ನ ಕಠಿಣ ಪರಿಶ್ರಮವೂ ಇರುತ್ತದೆ. ಸಿನಿಮಾ ನಮ್ಮನ್ನು ಒಗ್ಗೂಡಿಸುತ್ತದೆ. ಹಾಗಾಗಿ ಅದನ್ನು ಒಟ್ಟಿಗೆ ಆಚರಿಸೋಣʼ ಎಂದೂ ನಯನತಾರಾ ತನ್ನ ಅಭಿಮಾನಿಗಳಿಗೆ ಹೇಳಿದ್ದಾರೆ.




