ಬೆಂಗಳೂರು : ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಇಂದು ಆಗಸ್ಟ್ 23ರಿಂದ ಪ್ರಾರಂಭಿಸುತ್ತಿದೆ.
ವಿದ್ಯುತ್ ಮೀಟರ್ ರೀಡರುಗಳು ಎಲ್ಲ ಮನೆಗಳನ್ನು ಜಿಯೋಟ್ಯಾಗಿಂಗ್ ಮಾಡುವ ಕಾರ್ಯ ಪ್ರಾರಂಭಿಸಲಿದ್ದಾರೆ.ಯಾವುದೇ ಮನೆಗಳು ತಪ್ಪಿ ಹೋಗದಂತೆ ಯಶಸ್ವಿಯಾಗಿ ಸಮೀಕ್ಷೆ ಕೈಗೊಳ್ಳಲು ರಾಜ್ಯದ ಜನತೆ ಸಹಕರಿಸಬೇಕು ಎಂದು ಆಯೋಗ ಜನರಲ್ಲಿ ಮನವಿ ಮಾಡಿದೆ.
ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸುವ ಗುರಿಯೊಂದಿಗೆ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಸಮೀಕ್ಷೆಗೆ ಸಂಬಂಧಿಸಿದ ಪೂರ್ವಭಾವಿ ಕೆಲಸಗಳಾಗಿರುವ ಮನೆ ಪಟ್ಟಿ ಮತ್ತು ಅವುಗಳ ನಕ್ಷೆ (ಮ್ಯಾಪಿಂಗ್) ಸಿದ್ಧಪಡಿಸುವ ಕಾರ್ಯವನ್ನು ಒಳಗೊಂಡಿರುತ್ತದೆ. ಅದು ರಾಜ್ಯದಾದ್ಯಂತ ಎಲ್ಲಾ ಮನೆಗಳ ಸಂಪೂರ್ಣ ಎಣಿಕೆ, ಅನುಕ್ರಮ ಸಂಖ್ಯೆಗಳನ್ನು ನೀಡುವುದು ಮತ್ತು ಮ್ಯಾಪಿಂಗ್ ಮಾಡುವ ಕೆಲಸವನ್ನು ಸಾಧ್ಯವಾಗಿಸುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿರುವ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕವಿರುವುದರಿಂದ ಮನೆಗಳ ಆರ್.ಆರ್. ಮೀಟರ್ ಆಧಾರದ ಮೇಲೆ ಮನೆಗಳನ್ನು ಗುರುತಿಸಿ ಅಲ್ಲಿರುವ ಜನರ ಸಮೀಕ್ಷೆ ಮಾಡುವುದರಿಂದ ಯಾವುದೇ ಮನೆಗಳು ಸಮೀಕ್ಷಾ ವ್ಯಾಪ್ತಿಯಿಂದ ತಪ್ಪಿ ಹೋಗುವುದಿಲ್ಲ.ಇದರಿಂದ ಎರಡನೇ ಹಂತದಲ್ಲಿ ಸಮೀಕ್ಷೆಯ ಕಾರ್ಯವನ್ನು ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ಕಾರ್ಯಗತಗೊಳಿಸಲು ಅನುಕೂಲವಾಗುತ್ತದೆ.
ಎರಡನೆಯ ಹಂತದ ಸಮೀಕ್ಷೆಯ ಕಾರ್ಯವನ್ನು ದಸರಾ ರಜೆಯ ಅವಧಿಯಲ್ಲಿ 22 ನೇ ಸೆಪ್ಟೆಂಬರ್ ನಿಂದ 7 ನೇ ಅಕ್ಟೋಬರ್ 2025 ರವರೆಗೆ ನಡೆಸಲು ಗುರಿ ಹೊಂದಲಾಗಿದೆ. ಈ ಸಮಯದಲ್ಲಿ ಶಾಲಾ ರಜಾದಿನಗಳು ಇರುವುದರಿಂದ ಸಮೀಕ್ಷೆ ಕಾರ್ಯಕ್ಕೆ ಪೂರಕವಾಗುತ್ತದೆ ಎಂದು ಅಭಿಪ್ರಾಯಪಡಲಾಗಿದೆ.
ಇ-ಆಡಳಿತ ಮತ್ತು ಇಂಧನ ಇಲಾಖೆಗಳು ವಿದ್ಯುಚ್ಛಕ್ತಿ ಮೀಟರ್ ಸಂಪರ್ಕದ (ಆರ್.ಆರ್. ನಂಬರ್) ಆಧಾರದ ಮೇಲೆ ‘ಆಯಪ್’ ಅಭಿವೃದ್ಧಿಪಡಿಸಲಾಗಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರು ಸೇರಿದಂತೆ, ಆಯೋಗದ ಇಂಧನ ಇಲಾಖೆಯ, ಇ.ಡಿ.ಸಿ.ಎಸ್ ಸಂಸ್ಥೆಯ ಉತ್ಸಾಹಿ ಹಾಗೂ ಸೃಜನಶೀಲ ಸಲಹಾ ತಂಡದ ಸಹಕಾರದೊಂದಿಗೆ ಈ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಲಾಗಿದೆ.
ಎಸ್ಕಾಂಗಳ ಮೀಟರ್ ರೀಡರ್ ಗಳು, ಗ್ರಾಹಕರ ಮನೆ ಬಳಕೆ ವಿದ್ಯುತ್ ಸಂಪರ್ಕದ ಮೀಟರ್ ಅನ್ನು ಓದುವುದು ಮತ್ತು ಬಿಲ್ಲಿಂಗ್ ಮಾಡುವುದರ ಜೊತೆಗೆ ಮನೆಗಳನ್ನು ‘ಜಿಯೋ ಟ್ಯಾಗ್’ ಮಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವ್ಯಾಪ್ತಿಗೆ ಒಳಪಡಿಸುತ್ತಾರೆ.
ಮೀಟರ್ ರೀಡರ್ ಗಳು ಸೆರೆಹಿಡಿದ ಮನೆ ಪಟ್ಟಿ ಡೇಟಾವನ್ನು EDCS ನ ಸರ್ವರ್ ಗಳಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ನಂತರ ದ್ವಿತೀಯ ದತ್ತಾಂಶಗಳನ್ನು ಆಧರಿಸಿ, ಮೌಲೀಕರಿಸಿದ ನಂತರ ‘ಮನೆ ಪಟ್ಟಿ’ ಸಮೀಕ್ಷೆಯ ಉದ್ದೇಶಕ್ಕಾಗಿ ‘ಮ್ಯಾಪಿಂಗ್’ ಮಾಡಲಾಗುತ್ತದೆ. ಅಭಿವೃದ್ಧಿಪಡಿಸಲಾದ ಅಪ್ಲಿಕೇಶನ್ ನಲ್ಲಿ ಮನೆಯ ಸ್ಥಳ ವನ್ನು ಸೆರೆಹಿಡಿಯಲಾಗುತ್ತದೆ ಮತ್ತು ಪ್ರತಿ ಮನೆಗಳಿಗೆ ವಿಶಿಷ್ಟ್ಯ ಸಂಖ್ಯೆಯನ್ನು ನೀಡಲಾಗುತ್ತದೆ.




