ಸಿರುಗುಪ್ಪ:-ತಾಲೂಕಿನಾದ್ಯಂತ ಮುಸ್ಲೀಮ್ ಬಾಂಧವರಿಂದ ಸೋಮವಾರದಂದು ಈದ್ ಮಿಲಾದ್ ಹಬ್ಬದ ಸಂಭ್ರಮಾಚರಣೆ ಕಂಡುಬಂದಿತು.ನಗರದ ರಾಜಬೀದಿಯಲ್ಲಿ ಸಾಯಂಕಾಲ ಟಿಪ್ಪು ವೃತ್ತದಿಂದ ಆರಂಭದ ಮೆರವಣಿಗೆಯು ಶ್ರೀ ಅಭಯಾಂಜನೇಯ್ಯಸ್ವಾಮಿ ದೇವಸ್ಥಾನ ಹತ್ತಿರದವರೆಗೂ ತೆರಳಿ ನಂತರ ಆಯಾ ಮಸೀದಿಗಳಿಗೆ ವಾಪಸ್ಸು ಆಗಮಿಸಿ ಸಮಾಪ್ತಿಗೊಂಡಿತು.
ಅದ್ದೂರಿಯಾಗಿ ನಡೆದ ಮೆರವಣಿಗೆಯಲ್ಲಿ ವಿವಿಧ ಮಸೀದಿಗಳ ಕಮಿಟಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಮೆಕ್ಕಾ, ಮದೀನಾ, ಕುತ್‌ಬ್ ಮಿನಾರ್, ಖುರಾನ್ ಗ್ರಂಥದ ಆಕೃತಿಗಳು ಸೇರಿದಂತೆ ಇನ್ನಿತರ ಆಕೃತಿಗಳ ಅಲಂಕಾರದ ಪ್ರದರ್ಶನ, ವಾಹನಗಳಲ್ಲಿ ನೂತನ ವಸ್ತ್ರಧಾರಿ ಚಿಣ್ಣರು ನೋಡುಗರನ್ನು ಆಕರ್ಷಿಸಿದರು.
ಹಿರಿಯರು ಪ್ರವಾದಿ ಮಹಮದ್ ಪೈಗಂಬರರ ಸಂದೇಶ ಸಾರುವ ಹಾಡುಗಳನ್ನು ಹಾಡುತ್ತಾ ಬಂದರು. ಹಬ್ಬದ ಸಂಭ್ರಮಾಚರಣೆಯನ್ನು ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ ಮಹಿಳೆಯರು ನೆರೆದಿದ್ದರು.
ಯುವಕರು ಡಿ.ಜೆ ಹಾಡುಗಳಿಗೆ ನೃತ್ಯಗೈದು, ಬಾವುಟಗಳನ್ನು ತಿರುಗಿಸುತ್ತಾ ಸಂಭ್ರಮಿಸಿದರು.ಮದ್ರಸದ ಮಕ್ಕಳು ಒಂದೇ ಸಮವಸ್ತçವನ್ನು ತೊಟ್ಟು ಸಾಲಾಗಿ ಹೋಗುತ್ತಾ ಇಸ್ಲಾಂ ಧರ್ಮದ ತಿರುಳನ್ನು ತಿಳಿಸುತ್ತಾ ನೆರದಿದ್ದವರ ಗಮನ ಸೆಳೆದರು.ಮೆರವಣಿಗೆಯ ನಿಮಿತ್ತ ಅಲ್ಲಲ್ಲಿ ನೀರು ಇನ್ನಿತರ ಪಾನೀಯಗಳನ್ನು ವಿತರಣೆ ಮಾಡಲಾಯಿತು.
ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಸ್.ಪಿ ಡಾ.ಶೋಭಾರಾಣಿ .ವಿ.ಜೆ ಅವರ ಮಾರ್ಗದರ್ಶನದಂತೆ ಜಿಲ್ಲಾ ಪೋಲೀಸ್ ಇಲಾಖೆಯಿಂದ ಮುಂಜಾಗ್ರತೆಯಾಗಿ ಭದ್ರತೆಯ ನೇತೃತ್ವವನ್ನು ಎ.ಎಸ್.ಪಿ ಕೆ.ಪಿ.ರವಿಕುಮಾರ್ ವಹಿಸಿ ಸಂಪೂರ್ಣ ಮೆರವಣಿಗೆಯ ಭದ್ರತೆಯ ವಿವರದ ಮಾಹಿತಿ ಪಡೆಯುತ್ತಾ ಮಾರ್ಗದರ್ಶನ ನೀಡುತ್ತಿದ್ದರು.
ವರದಿ : ಶ್ರೀನಿವಾಸ ನಾಯ್ಕ