ತುರುವೇಕೆರೆ: ಕೈವಾರತಾತಯ್ಯ ಅವರು ನಾಡಿಗೆ ಸ್ಫೂರ್ತಿ. ಅವರು ದಿವ್ಯ ತೇಜಸ್ವಿಯಾಗಿ ಮನುಕುಲದ ಏಕತೆಗೆ ಶ್ರಮಿಸಿದ ಮಹಾನ್ ದಾರ್ಶನಿಕರು ಎಂದು ತಹಸೀಲ್ದಾರ್ ಕುಂಇ ಅಹಮದ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ತಾಲೂಕು ಆಡಳಿತ, ತಾಲೂಕು ಬಲಿಜ ಸಂಘ ಆಶ್ರಯದಲ್ಲಿ ನಡೆದ ಕೈವಾರದ ತಾತಯ್ಯ ಎಂದೇ ಪ್ರಸಿದ್ಧರಾದ ಶ್ರೀ ಯೋಗಿನಾರೇಯಣರ 300 ನೇ ಜಯಂತಿ ಆಚರಣೆಯಲ್ಲಿ ತಾತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ತಾತಯ್ಯನವರು ತಮ್ಮ ಭೋದನೆಗಳು, ಕೀರ್ತನೆಗಳ ಮೂಲಕ ಮನುಕುಲದ ಉದ್ದಾರಕ್ಕೆ ಶ್ರಮಿಸಿದರು. ಅಂತಿಮವಾಗಿ ಕೈವಾರದಲ್ಲಿ ತಮ್ಮ ಗುರುಪೀಠವನ್ನು ಸ್ಥಾಪಿಸಿ ಅಲ್ಲಿಂದಲೇ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯದಲ್ಲಿ ನಿರತರಾದರು. ಇಂದಿಗೂ ತಾತಯ್ಯನವರ ಜಯಂತಿಯಂದು ಸಹಸ್ರಾರು ಮಂದಿ ಕೈವಾರಕ್ಕೆ ತೆರಳಿ ತಮ್ಮ ಭಕ್ತಿ ಸಮರ್ಪಣೆ ಮಾಡುತ್ತಾರೆ ಎಂದರು. ತಾತಯ್ಯನವರ ತತ್ವಪದಗಳು ಇಂದಿಗೂ ಪ್ರಸ್ತುತ. ಅವರ ಕೀರ್ತನೆಗಳು ಮಾರ್ಗದರ್ಶನ ಮಾಡುತ್ತವೆ. ಅವರ ತತ್ವ, ಆದರ್ಶದ ಮೇಲೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕಿದೆ ಎಂದರು.

ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಸುಮತಿ, ಶಿರಸ್ತೇದಾರ್ ಸುನಿಲ್ ಕುಮಾರ್, ಆರೋಗ್ಯ ವೈದ್ಯಾಧಿಕಾರಿ ಡಾ.ರಂಗನಾಥ್, ಬಲಿಜ ಸಂಘದ ಅಧ್ಯಕ್ಷ ಬಿ.ನಂಜುಂಡಯ್ಯ, ಉಪಾಧ್ಯಕ್ಷ ಯೋಗೀಶ್, ಪ್ರಧಾನ ಕಾರ್ಯದರ್ಶಿ ರಮೇಶ್, ಸಹಕಾರ್ಯದರ್ಶಿ ಗೋಪಾಲಕೃಷ್ಣ, ಸದಸ್ಯರಾದ ರಾಘವೇಂದ್ರ, ಪ್ರಕಾಶ್, ರಾಘವೇಂದ್ರ ಟಿ.ಜಿ., ವಾಲ್ಮೀಕಿ ಸಮಾಜದ ವಸಂತಕುಮಾರ್, ದಲಿತ ಮುಖಂಡ ಕೃಷ್ಣಮೂರ್ತಿ ಸೇರಿದಂತೆ ಸಾಕಷ್ಟು ಮಂದಿ ಉಪಸ್ಥಿತರಿದ್ದರು
ವರದಿ: ಗಿರೀಶ್ ಕೆ ಭಟ್




