ಹಿಂದೂಪರ ಮತ್ತು ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ಇತ್ತೀಚೆಗಷ್ಟೇ ಹಸೆಮಣೆ ಏರಿದ್ದಾರೆ. ಬಿಗ್ ಬಾಸ್ ಸೀಸನ್ 11ರ ಮೂಲಕ ಜನಪ್ರಿಯತೆ ಗಳಿಸಿದ ಇವರು ಮೇ 9ರಂದು ಬಹುಕಾಲದ ಗೆಳೆಯನ ಜೊತೆ ಸಪ್ತದಿ ತುಳಿದರು. ಇದೀಗ ವಿಶೇಷ ವಿಡಿಯೋ ಹಂಚಿಕೊಂಡು ಗಮನ ಸೆಳೆದಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವೆಡ್ಡಿಂಗ್ ಫೋಟೋಶೂಟ್ ಹಂಚಿಕೊಂಡು, ”ಕನಸುಗಳ ಹೊತ್ತು ಸಾಗುತ್ತಿದ್ದೇವೆ, ಜೊತೆಯಾಗಿ” ಎಂದು ಹಾರ್ಟ್ ಸಿಂಬಲ್ನೊಂದಿಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡಿರುವ ನವದಂಪತಿಗೆ ನೆಟ್ಟಿಗರು ಶುಭ ಹಾರೈಸಿದ್ದಾರೆ.

ಇದಕ್ಕೂ ಮುನ್ನ, ಮದುವೆಗೆ ಸಂಬಂಧಿಸಿದ ಹಲವು ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಳೆ ಶಾಸ್ತ್ರ ವಿಡಿಯೋ ಹಂಚಿಕೊಂಡ ಅವರು, ಬಳೆ ಶಾಸ್ತ್ರ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ತಾಯಿ ಮತ್ತು ಸಹೋದರಿ ಜೊತೆಗಿನ ಸುಂದರ ಕ್ಷಣಗಳನ್ನು ಈ ವಿಡಿಯೋ ಒಳಗೊಂಡಿದೆ. ಅಗ್ನಿಸಾಕ್ಷಿಯಲ್ಲಿ ನವಪಯಣ ಆರಂಭಿಸುತ್ತಿರುವ ಪ್ರಮುಖ ಕ್ಷಣವನ್ನು ಹಂಚಿಕೊಂಡು, “ಜನುಮಗಳ ಜೊತೆಗೆ ಮೊದಲ ಹೆಜ್ಜೆ” ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಮಹತ್ವದ ಪೋಸ್ಟ್ಗೆ, “ನೂರು ಜನುಮಕ್ಕೂ ಜೊತೆಯಾಗಿ” ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.

ಗೋಮಾತೆಗೆ ಪೂಜೆ ಸಲ್ಲಿಸುತ್ತಿರುವ ವಿಡಿಯೋ ಹಂಚಿಕೊಂಡು, ”ಅವಳು ಕೇವಲ ಗೋವು ಮಾತ್ರ ಅಲ್ಲ. ಮುಕ್ಕೋಟಿ ದೇವತೆಗಳ ಹೊತ್ತು ನಮ್ಮ ಸಲಹುವ ದೇವತೆ” ಎಂದು ಬರೆದುಕೊಂಡಿದ್ದಾರೆ.
ಮದುವೆಗೆ ಬಿಗ್ ಬಾಸ್ ಸಹಸ್ಪರ್ಧಿಗಳಾದ ರಜತ್, ಉಗ್ರಂ ಮಂಜು, ಧನರಾಜ್ ಸೇರಿ ಕೆಲವರು ಆಗಮಿಸಿದ್ದರು. ಮಂಜು ಜೊತೆಗಿನ ವಿಡಿಯೋ ಹಂಚಿಕೊಂಡ ಚೈತ್ರಾ, ಥ್ಯಾಂಕ್ ಯೂ ಸೋ ಮಚ್ ಅಣ್ಣ. ದೂರದಿಂದ ಮನೆಯವರೆಗೆ ಬಂದು ಹರಸಿ ಹೋಗಿದ್ದಕ್ಕೆ ಎಂದು ಬರೆದುಕೊಂಡಿದ್ದಾರೆ. ಇನ್ನು ರಜತ್, ಹಿರಿಯರ ಸ್ಥಾನದಲ್ಲಿ ನಿಂತು ಮದುವೆ ಶಾಸ್ತ್ರಗಳನ್ನು ನಡೆಸಿಕೊಟ್ಟ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ.
ಚೈತ್ರಾ ಕುಂದಾಪುರ ಅವರು ಕಳೆದ ಶುಕ್ರವಾರ ತಮ್ಮ ಬಹುಕಾಲದ ಗೆಳೆಯ ಶ್ರೀಕಾಂತ್ ಕಶ್ಯಪ್ ಅವರನ್ನು ಗಣ್ಯರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಬಾಳಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಅನಿಮೇಷನ್ ಕೋರ್ಸ್ ಪೂರ್ಣಗೊಳಿಸಿರುವ ಶ್ರೀಕಾಂತ್ ಕಶ್ಯಪ್ ಅವರು ಜೋತಿಷ್ಯ, ಪೌರೋಹಿತ್ಯ ಕೆಲಸಕ್ಕೆ ತಮ್ಮನ್ನು ಸಮರ್ಪಿಸಿದ್ದಾರೆ. ಬಹುಕಾಲದ ಪ್ರೀತಿಗೆ ಇತ್ತೀಚೆಗಷ್ಟೇ ಮದುವೆ ಎಂಬ ಅಧಿಕೃತ ಮುದ್ರೆ ಬಿದ್ದಿದ್ದು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.




