ಬೆಳಗಾವಿ: ಬೆಳಗುಂದಿ ಗ್ರಾಮದ ಹೊರ ವಲಯದಲ್ಲಿ ನಿರ್ಮಾಣಗೊಳ್ಳಲಿರುವ ಹೈಟೆಕ್ ಕ್ರೀಡಾಂಗಣದ (ಮಲ್ಟಿ ಸ್ಟೇಡಿಯಂ) ಸ್ಥಳವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶನಿವಾರ ಪರಿಶೀಲಿಸಿದರು.
ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಸತತ ಪ್ರಯತ್ನದಿಂದಾಗಿ ಕ್ರೀಡಾ ಇಲಾಖೆಯ ವತಿಯಿಂದ ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿಯೇ ಮೊದಲ ಮಲ್ಟಿ ಸ್ಟೇಡಿಯಂ ನಿರ್ಮಾಣಗೊಳ್ಳಲಿದೆ.
ಈ ಸ್ಟೇಡಿಯಂ ನಲ್ಲಿ ಕ್ರಿಕೆಟ್, ಕುಸ್ತಿ, ಸ್ವಿಮಿಂಗ್ ಪೂಲ್, ಕಬಡ್ಡಿ, ವಾಲಿಬಾಲ್ ಮುಂತಾದ ಆಟಗಳಿಗೆ ವ್ಯವಸ್ಥೆ ಮಾಡಲಾಗುವುದು. ಸ್ಟೇಡಿಯಂ ನಲ್ಲಿ ಅತ್ಯಾಧುನಿಕ ದೀಪದ ಕಂಬಗಳ ಅಳವಡಿಕೆಯಾಗಲಿದ್ದು, ಹಗಲು -ರಾತ್ರಿ ಸ್ಟೇಡಿಯಂ ನ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಅತೀ ಶೀಘ್ರದಲ್ಲೇ ಈ ಸ್ಟೇಡಿಯಂ ನ ಸ್ಥಳವನ್ನು ಅಂತಿಮಗೊಳಿಸಿ, ಕಾಮಗಾರಿಗಳಿಗೆ ಚಾಲನೆ ನೀಡಲಿದ್ದೇವೆ ಎಂದು ಚನ್ನರಾಜ ಹಟ್ಟಿಹೊಳಿ ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಮಯದಲ್ಲಿ ಕ್ರೀಡಾ ಇಲಾಖೆ ಉಪ ನಿರ್ದೇಶಕ ಬಿ.ಶ್ರೀನಿವಾಸ್, ಶಿವಾಜಿ ಬೋಕಡೆ, ಪ್ರಹ್ಲಾದ ಚಿರಮುರ್ಕರ್, ದಯಾನಂದ ಗಾವಡಾ, ರೆಹಮಾನ್ ತಹಶಿಲ್ದಾರ, ಮಹಾದೇವ್ ಪಾಟೀಲ, ಶ್ಯಾಮ್ ಗಾವಡಾ, ಅಜಿತ್ ನಾಯ್ಕ್, ಕೃಷ್ಣ ಗಾವಡಾ, ರವಿ ನಾಯ್ಕ್, ಮೆಹಬೂಬ್ ಮುಜಾವರ್, ಆಪ್ತ ಸಹಾಯಕ ಸಾತೇರಿ ಕೊಕಿತಕರ್ ಮುಂತಾದವರು ಉಪಸ್ಥಿತರಿದ್ದರು.
ವರದಿ ಪ್ರತೀಕ ಚಿಟಗಿ