ಲಕ್ನೋ : ಎಂ.ಎಸ್. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಪಂದ್ಯಾವಳಿಯಲ್ಲಿ ಕೊನೆಗೂ ಗೆಲುವಿನ ಲಯಕ್ಕೆ ಮರಳಿತು. ಇಲ್ಲಿ ನಡೆದ ಲಕ್ನೋ ಸೂಪರ್ ಗೇಂಟ್ಸ್ ವಿರುದ್ಧದ 30 ನೇ ಲೀಗ್ ಪಂದ್ಯದಲ್ಲಿ ಅದು ಎದುರಾಳಿ ತಂಡವನ್ನು ಇನ್ನು ಮೂರು ಎಸೆತಗಳು ಬಾಕಿ ಇರುವಂತೆ 5 ವಿಕೆಟ್ ಗಳಿಂದ ಮಣಿಸಿ ಅಗತ್ಯವಾಗಿ ಬೇಕಿದ್ದ ಪಾಯಿಂಟ್ ಗಳನ್ನು ಕಲೆ ಹಾಕಿತು.
ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಗೇಂಟ್ಸ್ ತಂಡ ನಿಗದಿತ 20 ಓವರುಗಳಲ್ಲಿ 7 ವಿಕೆಟ್ ಗೆ 166 ರನ್ ಗಳಿಸಿತು. ಸುಲಭದ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 19.3 ಓವರುಗಳಲ್ಲಿ 5 ವಿಕೆಟ್ ಗೆ 168 ರನ್ ಗಳಿಸಿ ಕೊನೆಗೂ ಗೆಲುವಿನ ನಗೆ ಬೀರಿತು.
ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಟ್ಟಾರೆ ತಾನಾಡಿರುವ 7 ಪಂದ್ಯಗಳಿಂದ 2 ರಲ್ಲಿ ಗೆದ್ದು 5 ರಲ್ಲಿ ಸೋತಿದ್ದು, ಕೊನೆಯ ಸ್ಥಾನಕ್ಕೆ ಕುಸಿದಿದೆ. ಆದರೆ ಈ ಗೆಲುವಿನೊಂದಿಗೆ ಪ್ಲೇ ಆಪ್ ಆಸೆಯನ್ನು ಅದು ಜೀವಂತವಾಗಿರಿಸಿಕೊಂಡಿತು. ಮುಂಬೈ ಇಂಡಿಯನ್ಸ್, ಸನ್ ರೈಸ್ ಹೈದರಾಬಾದ್,ರಾಜಸ್ತಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಲಾ ಅಂಕಗಳನ್ನು ಪಡೆದಿದ್ದು, ರನ್ ಸರಾಸರಿ ಆಧಾರದ ಮೇಲೆ ಮಾತ್ರ ಅಂಕಪಟ್ಟಿಯಲ್ಲಿ ಹಿಂದೆ ಮುಂದೆ ಕಾಣಿಸಿಕೊಂಡಿವೆ.
ಗುಜರಾತ್ ಟೈಟನ್ಸ್, ದೆಹಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಗೇಂಟ್ಸ್ ತಲಾ 8 ಅಂಕಗಳನ್ನು ಕಲೆ ಹಾಕಿದ್ದು, ಕ್ರಮವಾಗಿ ಒಂದರಿಂದ 4 ನೇ ಸ್ಥಾನಗಳನ್ನು ಅಂಕಪಟ್ಟಿಯಲ್ಲಿ ಪಡೆದುಕೊಂಡಿವೆ. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ತಲಾ ಮೂರು ಗೆಲುವಿನೊಂದಿಗೆ 6 ಅಂಕಗಳನ್ನು ಕಲೆ ಹಾಕಿದ್ದು, ಪಾಯಿಂಟ್ ಪಟ್ಟಿಯಲ್ಲಿ 5 ಹಾಗೂ 6 ನೇ ಸ್ಥಾನದಲ್ಲಿವೆ.
ಸ್ಕೋರ್ ವಿವರ
ಲಕ್ನೋ ಸೂಪರ್ ಗೇಂಟ್ಸ್ 20 ಓವರುಗಳಲ್ಲಿ 7 ವಿಕೆಟ್ ಗೆ 166
( ವೃಷಬ್ ಪಂತ್ 63 (49 ಎಸೆತ, 4 ಬೌಂಡರಿ, 4 ಸಿಕ್ಸರ್) ರವೀಂದ್ರ ಜಡೆಜಾ 24 ಕ್ಕೆ 2, ಮಾತೆಶಾ ಫಾತಿರಾನಾ 45 ಕ್ಕೆ 2
ಚೆನ್ನೈ ಸೂಪರ್ ಕಿಂಗ್ಸ್ 19.3 ಓವರುಗಳಲ್ಲಿ 5 ವಿಕೆಟ್ ಗೆ 168
(ಶಿವಂ ದುಬೈ ಅಜೇಯ 43 ( 37 ಎಸೆತ, 3 ಬೌಂಡರಿ, 2 ಸಿಕ್ಸರ್), ರಚಿನ್ ರವೀಂದ್ರ 37 ( 22 ಎಸೆತ, 5 ಬೌಂಡರಿ)
ಎಂ.ಎಸ್. ಧೋನಿ ಅಜೇಯ 26 ( 11 ಎಸೆತ, 4 ಬೌಂಡರಿ, 1 ಸಿಕ್ಸರ್) ರವಿ ಬಿಸ್ನೋಯ್ 18 ಕ್ಕೆ 2)
–ಪಂದ್ಯ ಶ್ರೇಷ್ಠ: ಎಂ.ಎಸ್. ಧೋನಿ