ಬಳ್ಳಿಗೇರಿ ಗ್ರಾ.ಪಂ ಅಧ್ಯಕ್ಷರಿಗೆ ಕನ್ನಡ ಪರ ಸಂಘಟನೆಗಳಿಂದ ಮನವಿ
ಅಥಣಿ: ವೀರರಾಣಿ ಕಿತ್ತೂರು ಚೆನ್ನಮ್ಮಳ ಮೂರ್ತಿ ಪ್ರತಿಷ್ಠಾಪನೆಗಾಗಿ ಮೀಸಲಿಟ್ಟಿರುವ 5 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕ ಹೋರಾಟ ಸಮಿತಿಯ ಅಧ್ಯಕ್ಷ ವಿಜಯ ಪವಾರ ಆಗ್ರಹಿಸಿದರು.
ಸೋಮವಾರ ತಾಲೂಕಿನ ಬಳ್ಳಿಗೇರಿ ಗ್ರಾಮ ಪಂಚಾಯತ ಕಚೇರಿ ಮುಂದೆ ಕನ್ನಡಪರ ಸಂಘಟನೆಗಳ ಹೋರಾಟದ ನೇತೃತ್ವ ವಹಿಸಿ ಮಾತನಾಡಿದರು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿರುವ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಕನ್ನಡ ಪರ ಸಂಘಟನೆಗಳಿಂದ ಪ್ರತಿವರ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗಡಿಭಾಗದಲ್ಲಿ ಕನ್ನಡತನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಜತ್ತ -ಜಂಬೋಟ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಈ ಬಳ್ಳಿಗೇರಿ ಗ್ರಾಮದ ವೀರರಾಣಿ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮಳ ಮೂರ್ತಿ ಪ್ರತಿಷ್ಠಾಪನೆಗಾಗಿ ಸಂಕಲ್ಪ ಹೊಂದಲಾಗಿದೆ.
ಈ ಹಿಂದೆ ಗ್ರಾಮ ಪಂಚಾಯಿತಿ ಆಡಳಿತಕ್ಕೆ ನಾವು ಮನವಿ ಸಲ್ಲಿಸಿದಾಗ ಆಡಳಿತದ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿ ಸು. 5 ಲಕ್ಷ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ. ಈ ಅನುದಾನವನ್ನ ಕೂಡಲೇ ಬಿಡುಗಡೆ ಮಾಡುವ ಮೂಲಕ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಕಾಮಗಾರಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕು ಎಂದು ಗ್ರಾಮ ಪಂಚಾಯಿತಿ ಆಡಳಿತವನ್ನು ಒತ್ತಾಯಿಸಿದರು.
ಪ್ರವೀಣಶೆಟ್ಟಿ ಬಣದ ಕರವೇ ಅಧ್ಯಕ್ಷ ದೀಪಕ ಬುರ್ಲಿ ಮಾತನಾಡಿ ಗ್ರಾಮ ಪಂಚಾಯಿತಿ ಆಡಳಿತ 15ನೇ ಹಣಕಾಸು ಯೋಜನೆ ಅಡಿ ಸು. 5 ಲಕ್ಷ ರೂ ಗಳನ್ನು ಗ್ರಾಮದಲ್ಲಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಮೀಸಲಿಟ್ಟಿರುವ ಕಾರ್ಯಕ್ಕೆ ಅಭಿನಂದಿಸುತ್ತೇವೆ. ಗ್ರಾಮ ಪಂಚಾಯಿತಿ ಆಡಳಿತ ಕೂಡಲೇ ಈ ಅನುಮಾನವನ್ನು ಬಿಡುಗಡೆ ಮಾಡಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ಸಹಕರಿಸಬೇಕೆಂದು ಮನವಿ ಮಾಡಿದರು. ನಂತರ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ , ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಗ್ರಾಮ ಪಂಚಾಯತ ಅಡಳಿತ ಅಧಿಕಾರಿಗಳು ಮಾತನಾಡಿ ಗ್ರಾಮದ ಚೆನ್ನಮ್ಮ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಎಲ್ಲ ಸದಸ್ಯರ ಒಪ್ಪಿಗೆ ಪಡೆದುಕೊಂಡು ಅನುದಾನವನ್ನು ಮೀಸಲಾಡಲಾಗಿದ್ದೆ. ಶೀಘ್ರದಲ್ಲಿಯೇ ಈ ಅನುದಾನವನ್ನು ಬಿಡುಗಡೆ ಮಾಡುತ್ತೇವೆ ಎಂದು ಭರವಸೆಯ ನೀಡಿದರು.
ಈ ವೇಳೆ ಮಾಜಿ ಜಿ. ಪಂ. ಸದಸ್ಯ ಬಾಬಾಗೌಡ ಪಾಟೀಲ. ಹನುಮಂತಗೌಡ ಪಾಟೀಲ. ಹೈದರ್ ಬಾಲ್ದಾರ. ರೈತ ಮುಖಂಡ ಶಿವಾನಂದ ಖೋತ. ಜಯ ಕರ್ನಾಟಕ ಸಂಘಟನೆಯ ಪ್ರಹ್ಲಾದ ವಾಘಮೋರೆ, ಮಾಜಿ ಸೈನಿಕ ಗುರಪ್ಪ ಮಗದುಮ. ಸಿದ್ಧಾರ್ಥ ಮಡ್ಡಿ, ರಮೇಶ ಅಥಣಿ, ರವಿ ಕವಲಗುಡ್ಡ, ಮುರಿಗೆಪ್ಪ ಹಲ್ಲೋಳಿ, ರಮೇಶ ಪಾಟೀಲ, ಪೈಗಂಬರ್ ಮುಲ್ಲಾ, ಕೃಷ್ಣ ದೊಡ್ಡಮನಿ, ಅನಂತ ಜಾದವ, ಸುಭಾಷ ಮಡಿವಾಳ, ನಿಂಗಪ್ಪ ಚೌಗುಲೆ, ಮಹೇಶ ವಾಘಮೋರೆ, ಬಸವರಾಜ ನಂದಗಾವ ಚಿರಗುಂತಿ ಇನ್ನಿತರರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




