ಸಿರುಗುಪ್ಪ : ನಗರದ ತಾಲೂಕು ಕಛೇರಿಯಲ್ಲಿ ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟದ ವತಿಯಿಂದ ಕನ್ನಡ ಮಾಧ್ಯಮದಲ್ಲಿನ ಶಾಲಾ ಕಾಲೇಜುಗಳಿಗೆ ಎಲ್ಲಾ ಭಾಗ್ಯಗಳ ಜೊತೆಗೆ ವೇತನಾನುದಾನ ಭಾಗ್ಯವನ್ನು ನೀಡುವಂತೆ ಕೋರಿ ತಹಶೀಲ್ದಾರ್ ಗೌಸಿಯಾ ಬೇಗಂ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

ನಂತರ ಸರ್ಕಾರಿ ನೌಕರರ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ವಿವೇಕಾನಂದ ಹಿರಿಯ ಪ್ರಾಥಮಿಕ ಪ್ರೌಡಶಾಲೆಯ ಅಧ್ಯಕ್ಷರಾದ ಎಮ್.ಮೌಲಾಲಿ ಅವರು ರಾಜ್ಯದಲ್ಲಿ 386 ಪ್ರೌಡಶಾಲೆಗಳು, 210 ಪ್ರಾಥಮಿಕ ಶಾಲೆಗಳು, 135 ಕಾಲೇಜುಗಳು ಕನ್ನಡ ಮಾಧ್ಯಮದಲ್ಲಿವೆ.
ಸರ್ಕಾರಕ್ಕೆ ಮನವಿ ಮಾಡುವುದೇನೆಂದರೆ ಚುನಾವಣಾ ಪ್ರಣಾಳಿಕೆಯ ಘೋಷಣೆಯಂತೆ 1995 ರಿಂದ 2012ರ ಒಳಗೆ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ಅನುದಾನಕ್ಕೊಳಪಡಿಸಬೇಕು.
ಇದರಿಂದಾಗಿ ಶಾಲಾ ಕಾಲೇಜುಗಳನ್ನು ನಿರ್ವಹಿಸುತ್ತಿರುವ ಆಡಳಿತ ಮಂಡಳಿಗೆ, ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಬದುಕು ರೂಪಿಸಲು ಸಾಧ್ಯವಾಗುತ್ತದೆ. ಅಲ್ಲದೇ ಮಕ್ಕಳಿಗೂ ಉತ್ತಮ ಸೌಲಭ್ಯಗಳು ದೊರೆತಂತಾಗುತ್ತದೆ.
ಸರ್ಕಾರ ಈ ಅನುದಾನ ರಹಿತ ಕನ್ನಡ ಮಾದ್ಯಮ ಶಾಲೆಗಳನ್ನು ಅನುದಾನಗೊಳಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷರಾದ ಎನ್.ಪಂಪಾಪತಿ ಅವರು ಮಾತನಾಡಿ ಕನ್ನಡ ಶಾಲೆಗಳು ಪ್ರಾರಂಭಿಸಲು ಷರತ್ತುಗಳನ್ನು, ಖಾಸಗಿ ಶಾಲೆಗಳ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನವೀಕರಣ ಪ್ರಕ್ರಿಯೆ ಸರಳಗೊಳಿಬೇಕು.
ಬಡಮಕ್ಕಳಿಗೆ ದಾರಿದೀಪವಾಗಿದ್ದ ಆರ್.ಟಿ.ಇ ಕಾಯ್ದೆಯನ್ನು ಖಾಸಗಿ ಶಾಲೆಗಳಿಗೆ ಮರು ಜಾರಿ ಮಾಡಬೇಕು. ಉತ್ತರ ಕರ್ನಾಟಕ ಭಾಗದ 371(ಜೆ) ಕಾನೂನಿನ ಅಡಿಯಲ್ಲಿ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಶಾಲೆಗಳಿಗೆ ನೀಡಬೇಕು.
ಕನ್ನಡ ಶಾಲೆಗಳನ್ನು ಬಂದ್ ಮಾಡಿ ಕರ್ನಾಟಕ ಪಬ್ಲಿಕ್ ಶಾಲೆ(ಇಂಗ್ಲೀಷ್ ಮಾಧ್ಯಮ) ಪ್ರಾರಂಭಿಸಿರುವುದನ್ನು ಕೈ ಬಿಡಬೇಕು. ಕನ್ನಡ ಶಾಲೆಗಳನ್ನು ರಕ್ಷಿಸುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಸಿರುಗುಪ್ಪ ಶ್ರೀ ಯಲ್ಲಮ್ಮ ದೇವಿ ಪ್ರೌಡಶಾಲೆಯ ಸದಸ್ಯ ಶಬ್ಬೀರ್, ತೆಕ್ಕಲಕೋಟೆ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಎಮ್.ಮಾರುತಿ, ಸ್ವಾತಿ ಹಿರಿಯ ಪ್ರಾಥಮಿಕ ಮತ್ತು ಪ್ರೌಡಶಾಲೆಯ ಕಾರ್ಯದರ್ಶಿ ಜೆ.ಹನುಮಂತರೆಡ್ಡಿ ಇದ್ದರು.
ವರದಿ : ಶ್ರೀನಿವಾಸ ನಾಯ್ಕ. ಸಿರುಗುಪ್ಪ.




