ತುರುವೇಕೆರೆ: ತಾಲೂಕಿನ ಕೆ.ಮಾವಿನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಮಕ್ಕಳಲ್ಲಿ ಗಣಿತದ ಪ್ರಾಮುಖ್ಯತೆಯನ್ನು ತಿಳಿಸುವ ಸಲುವಾಗಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು.
ಮಕ್ಕಳ ಸಂತೆ ಉದ್ಘಾಟಿಸಿದ ಕಣತೂರು ಗ್ರಾಪಂ ಅಧ್ಯಕ್ಷ ರಂಜಿತ್ ಕುಮಾರ್ ಮಾತನಾಡಿ, ಪ್ರಸ್ತುತ ಪ್ರತಿಯೊಬ್ಬ ವ್ಯಕ್ತಿಗೂ ವ್ಯವಹಾರಿಕ ಜ್ಞಾನ ಬಹಳ ಮುಖ್ಯ. ಲೆಕ್ಕಾಚಾರದ ಬದುಕು ಮನುಷ್ಯನನ್ನು ಸಶಕ್ತ ಹಾಗೂ ಸದೃಢನನ್ನಾಗಿಸುತ್ತದೆ ಎಂದರು.
ಮಕ್ಕಳಲ್ಲಿ ವ್ಯಾಸಂಗ ಹಂತದಲ್ಲೇ ವ್ಯಾವಹಾರಿಕ ಜ್ಞಾನ ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಸಂತೆ ಸಹಕಾರಿಯಾಗಲಿದೆ. ಪೋಷಕರು ತಮ್ಮ ಮನೆಗೆ ಸಣ್ಣಪುಟ್ಟ ದಿನಸಿ ಸಾಮಾನು ಕೊಂಡುಕೊಳ್ಳಬೇಕಾದರೆ ಮಕ್ಕಳನ್ನು ಅಂಗಡಿಗೆ ಕಳಿಸಿ ಅವರಿಗೆ ಲೆಕ್ಕಾಚಾರದ ಜ್ಞಾನದ ಜೊತೆಗೆ ಸಾರ್ವಜನಿಕ ಕ್ಷೇತ್ರದಲ್ಲಿ ಸಂವಹನದ ಧೈರ್ಯ ಬೆಳೆಯಲು ನೆರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮಕ್ಕಳು ಸಂತೆಯಲ್ಲಿ ಹಣ್ಣು, ಸೊಪ್ಪು, ತರಕಾರಿ, ಚುರುಮುರಿ ಮುಂತಾದ ವಿವಿಧ ತಿನಿಸುಗಳನ್ನು ಪಕ್ಕ ವ್ಯಾಪಾರಸ್ಥರಂತೆ ಮಾರಾಟ ಮಾಡಿದ್ದು ಗಮನ ಸೆಳೆಯಿತು.
ಎಸ್.ಡಿ.ಎ.ಸಿ. ಅಧ್ಯಕ್ಷ ತಿಮ್ಮೇಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್, ಸದಸ್ಯರಾದ ವಾಸು, ಶ್ರೀನಿವಾಸ್, ಬಸವರಾಜು, ಸೌಮ್ಯ, ಯಶೋಧ, ರಶ್ಮಿ, ಫಾತಿಮಾ, ಶಾಲೆಯ ಶಿಕ್ಷಕಿಯರಾದ ಆನಂದಜಲ, ಸರಸ್ವತಿ, ಜಯರಂಗಮ್ಮ, ನೇತ್ರಾವತಿ ಹಾಗೂ ಪೋಷಕರು, ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್