ನಟ ವಿಜಯರಾಘವೇಂದ್ರ ಜೊತೆಗೆ ಮೇಘನಾ ರಾಜ್ ಅವರ ಎರಡನೇ ಮದುವೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದರಿಂದಾಗಿ ಚಿರಂಜೀವಿ ಸರ್ಜಾ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಸುಳ್ಳು ಸುದ್ದಿ ಹರಿಬಿಡುವವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಹೌದು ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ 2020ರಲ್ಲಿ ತೀವ್ರ ಉಸಿರಾಟದ ಸಮಸ್ಯೆಯಿಂದ ನಿಧನರಾದರು. ಆಗ ಮೇಘನರಾಜ್ ಐದು ತಿಂಗಳ ಗರ್ಭಿಣಿ. ಈ ಸಂದರ್ಭದಲ್ಲಿ ಮೇಘನಾರಾಜ್ ಅನುಭವಿಸಿದ ನೋವು ಕಷ್ಟ ನಿಜಕ್ಕೂ ಯಾವ ಹೆಣ್ಣಿಗೂ ಬೇಡ. ಚಿರು ಇಲ್ಲ ಅನ್ನೋ ಅಗಾಧ ನೋವು ಒಂದು ಕಡೆ ಆದರೆ ಹೊಟ್ಟೆಯಲ್ಲಿ ಇರುವ ಮಗುವಿಗೆ ನೋವಾಗುತ್ತಾ ಅನ್ನೋ ನೋವು. ಇದು ಮೇಘನಾ ಅವರ ಪಾಲಿಗೆ ತೀವ್ರ ನೋವು ತಂದು ಕೊಟ್ತು. ಈ ಘಟನೆಯಿಂದ ಹೊರ ಬರುವುದು ಮೇಘನಾ ಅವರಿಗೆ ಸಾಧ್ಯವಾಗುತ್ತಿಲ್ಲ. ಆದರೂ ಮನಸ್ಸಿನಲ್ಲಿ ನೋವಿಟ್ಟುಕೊಂಡು ಮಗ ರಾಯನ್ ಮುಖದಲ್ಲಿ ಚಿರುವನ್ನು ಕಾಣುತ್ತಾ ಹೇಗೋ ಜೀವನ ಕಳೆಯುತ್ತಿದ್ದಾರೆ.
ಚಿರು ನಿಧನರಾದ ಬಳಿಕ ನಟ ವಿಜಯರಾಘವೇಂದ್ರ ಅವರ ಜೀವನದಲ್ಲಿ ಇಂತಹದ್ದೇ ಒಂದು ದುರಂತ ಘಟನೆ ನಡೆದು ಹೋಯ್ತು. ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಅವರು ಪ್ರವಾಸಕ್ಕೆಂದು ವಿದೇಶದಲ್ಲಿ ಇರುವಾಗ ಹೃದಯಾಘಾತದಿಂದ ಸಾವನ್ನಪ್ಪಿದರು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪತ್ನಿ ಸ್ಪಂದನಾ ಇಲ್ಲ ಅನ್ನೋದನ್ನು ವಿಜಯರಾಘವೇಂದ್ರ ಅರಗಿಸಿಕೊಳ್ಳುವುದು ಕೂಡ ಕಷ್ಟವಾಗಿದೆ. ಮಗನ ಮುಖದಲ್ಲಿ ಸ್ಪಂದನಾ ಅವರನ್ನು ಕಾಣುತ್ತಾ ವಿಜಯರಾಘವೇಂದ್ರ ದಿನಗಳನ್ನ ಕಳೆಯುತ್ತಿದ್ದಾರೆ. ಈ ಎರಡು ಘಟನೆ ನಡೆದು ಕೆಲ ವರ್ಷಗಳು ಕಳೆದಿವೆ ಅಷ್ಟೇ. ಮೇಘನಾರಾಜ್ ಹಾಗೂ ವಿಜಯರಾಘವೇಂದ್ರ ಇಬ್ಬರೂ ಕೂಡ ತಮ್ಮ ಜೀವನದಲ್ಲಿ ನಡೆದ ಈ ದುರಂತ ಘಟನೆಯಿಂದ ಸಂಪೂರ್ಣವಾಗಿ ಹೊರ ಬಂದಿಲ್ಲ. ಹೀಗೆ ನೋವಿನಲ್ಲಿ ಜೀವನ ದೂಡುತ್ತಿರುವ ಈ ಇಬ್ಬರಿಗೆ ಕೆಲ ಜನ ಮದುವೆ ಮಾಡಿಸಲು ಮುಂದಾಗಿದ್ದಾರೆ.
ಸ್ವಭಾವದಲ್ಲಿ ವಿಜಯರಾಘವೇಂದ್ರ ಹಾಗೂ ಮೇಘನಾರಾಜ್ ಒಂದೇ ಎನ್ನುವ ಕಾರಣಕ್ಕೆ ಹಾಗೂ ಮೇಘನಾರಾಜ್ ಎರಡನೇ ಮದುವೆಗೆ ಚಿರು ಒಪ್ಪಿಗೆ ಕೊಡಬೇಕು ಎಂದರು ಎನ್ನುವ ಕಾರಣಕ್ಕೆ ಜನ ವಿಜಯರಾಘವೇಂದ್ರ ಹಾಗೂ ಮೇಘನಾರಾಜ್ ಎರಡನೇ ಮದುವೆ ಆಗಲಿದ್ದಾರೆ ಎಂದು ಗಾಳಿ ಸುದ್ದಿಯನ್ನು ಹರಡಿದ್ದಾರೆ.
ಮೇಘನಾರಾಜ್ ಕುಟುಂಬಸ್ಥರು ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇಷ್ಟರಲ್ಲಿ ಮೇಘನಾ ವಿಜಯ್ ಮದುವೆ ಆಗಲಿದ್ದಾರೆ ಎಂದು ಊಹಾಪೋಹಗಳ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ಮೇಘನಾ ಆಗಲಿ ವಿಜಯ್‌ರಾಘವೇಂದ್ರ ಆಗಲಿ ಯಾವತ್ತು ಮಾತನಾಡಿಲ್ಲ. ಜೊತೆಗೆ ಮೇಘನಾ ರಾಜ್ ಅವರು ಮಾತನಾಡಿ ವಿಜಯರಾಘವೇಂದ್ರ ಅವರನ್ನು ನಾನು ಮದುವೆ ಆಗುತ್ತೇನೆ ಅನ್ನೋದು ಸುಳ್ಳು ಸುದ್ದಿ ಅಂತಲೂ ಹೇಳಿದ್ದಾರೆ. ಹೀಗಿರುವಾಗ ಯಾವ ಆಧಾರದ ಮೇಲೆ ಈ ಸುದ್ದಿಗಳನ್ನು ಮಾಡುತ್ತಿದ್ದೀರಿ ಎಂದು ಚಿರು ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
ನೋವಿನಲ್ಲಿರುವ ಒಂದು ಹೆಣ್ಣು ಮಗಳ ಬಗ್ಗೆ ಈ ರೀತಿ ಕೆಟ್ಟದಾಗಿ ಸುದ್ದಿಗಳನ್ನು ಮಾಡುವುದು ನಿಮಗೆ ನಾಚಿಕೆ ಆಗಲ್ವಾ ಎಂದು ಚಿರು ಅಭಿಮಾನಿಗಳು ಸುಳ್ಳು ಸುದ್ದಿ ಮಾಡೋರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೇಘನಾರಾಜ್ ನಿಮ್ಮ ಮನೆಯ ಹೆಣ್ಣಾಗಿದ್ರೆ ಹೀಗೆ ಮಾಡ್ತಾಯಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ. ಒಂದು ಸುದ್ದಿ ಮಾಡುವಾಗ, ವಿಡಿಯೋ ಹರಿಬಿಡುವಾಗ ಒಂದು ಹೆಣ್ಣಿನ ಜೀವನದ ಬಗ್ಗೆ, ಅವರಿಗಾಗುವ ನೋವಿನ ಬಗ್ಗೆ ಯೋಚಿಸಿ ಎಂದು ಚಿರು ಅಭಿಮಾನಿಗಳು ಸಲಹೆ ನೀಡಿದ್ದಾರೆ. ಇಲ್ಲವಾದಲ್ಲಿ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೂಡ ಕೊಟ್ಟಿದ್ದಾರೆ.