ಚಿತ್ರದುರ್ಗ : ಚಿತ್ರದುರ್ಗದಲ್ಲಿ ನಡೆದ ಬಸ್ ದುರಂತದಲ್ಲಿ ಮೂವರು ಸ್ನೇಹಿತೆಯರು ಅದೃಷ್ಟವಶಾತ್ ಪಾರಾಗಿದ್ದಾರೆ.ಹಿರಿಯೂರು ಬಳಿ ಸಂಭವಿಸಿದ ಅಪಘಾತದಲ್ಲಿ ಮೂವರು ಸ್ನೇಹಿತರು ಬದುಕುಳಿದಿದ್ದಾರೆ.ಬೆಂಗಳೂರು ಮೂಲದ ರಕ್ಷಿತಾ, ಗಗನ ಹಾಗೂ ಗೋಕರ್ಣ ಮೂಲದ ರಶ್ಮಿ ಅವಘಡದಿಂದ ಪಾರಾಗಿದ್ದಾರೆ.
ಮೂವರು ಸ್ನೇಹಿತೆಯರು ಬೆಂಗಳೂರಿನ ಡಿಲೈಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಜೆ ಇದ್ದ ಕಾರಣಕ್ಕೆ ಮೂವರು ಗೋಕರ್ಣಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಹೇಗೋ ದುಸ್ಸಾಹಸ ಪಟ್ಟು ಬೆಂಕಿ ತಗುಲಿ ಹೊತ್ತಿ ಉರಿಯುತ್ತಿದ್ದ ಬಸ್ ನಿಂದ ಹೊರಗೆ ಜಿಗಿದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪದ ಗೊರ್ಲತ್ತು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಬಳಿ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 11 ಮಂದಿ ಸಜೀವವಾಗಿದಹನಗೊಂಡಿದ್ದಾರೆ.
ಡಿವೈಡರ್ ದಾಟಿ ಬಂದ ಲಾರಿ ಸೀಬರ್ಡ್ ಖಾಸಗಿ ಸ್ಲೀಪರ್ ಕೋಚ್ ಬಸ್ ಗೆ ಡಿಕ್ಕಿ ಹೊಡೆದಿದ್ದು, 11 ಮಂದಿ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ, ವಾಹನವು ದಟ್ಟ ಹೊಗೆ ಮತ್ತು ಎತ್ತರದ ಜ್ವಾಲೆಗಳಿಂದ ಆವೃತವಾಯಿತು, ಕ್ಯಾಬಿನ್ ಒಳಗೆ ಮಲಗಿದ್ದ ಅನೇಕ ಪ್ರಯಾಣಿಕರು ಸಿಕ್ಕಿಹಾಕಿಕೊಂಡರು. ಬಸ್ ಚಾಲಕ, ಕ್ಲೀನರ್ ಮತ್ತು ಕಂಡಕ್ಟರ್ ಪವಾಡಸದೃಶವಾಗಿ ಪಾರಾದರು.




