ಬೆಂಗಳೂರು: ಕಲಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 2 ರಂದು ಆರ್ ಎಸ್ ಎಸ್ ,ಭೀಮ ಆರ್ಮಿ,ಇತರೆ ಸಂಘಟನೆಗಳು ಪಥ ಸಂಚಲನ ನಡೆಸುತ್ತಿರುವ ದಿನವೇ ಕ್ರೈಸ್ತ ಸಂಘಟನೆಯೊಂದು ವಾಕ್ ಪ್ರಾರ್ಥನಾ ಕೋರಿರುವುದು ಸರಿಯಲ್ಲ,ಹಾಗಾದಲ್ಲಿ ಸಮಾಜದಲ್ಲಿ ತಪ್ಪು ಸಂದೇಶ ರವಾನೆ ಆಗುತ್ತದೆ.ಹಾಗಾಗಿ,ಇದಕ್ಕೆ ಇಡೀ ಕ್ರೈಸ್ತ ಸಮುದಾಯದ ಬೆಂಬಲ ಇಲ್ಲ ಎಂದು ಬೆಂಗಳೂರಿನಲ್ಲಿ ಅಖಿಲ ಭಾರತ ಕ್ರೈಸ್ತ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ಪ್ರಜ್ವಲ್ ಸ್ವಾಮಿ ಬಿ ವಿ ನ್ಯೂಸ್-5 ಗೆ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಎಂ.ಟಿ.ಎಸ್ ಕಾಲೋನಿಯಲ್ಲಿರುವ ಅವರ ಪ್ರದಾನ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗೀರ್ ಅವರು ಕ್ರೈಸ್ತರು, ಚಿತ್ತಾಪುರ ಪಥ ಸಂಚಲನ ದಿನದಂದೇ ಕ್ರೈಸ್ತರು ಪ್ರಾರ್ಥನಾ ಪಥಸಂಚಲನ ನಡೆಸುತ್ತೇವೆ ಎಂದು ಹೇಳಿರುವುದು, ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಕ್ರೈಸ್ತ ಧರ್ಮದ ಯಾವುದೇ ಗುರುಗಳನ್ನಾಗಲಿ, ಮುಖಂಡರನ್ನಾಗಲಿ ಸಂಪರ್ಕ ಮಾಡದೆ ಹೇಳಿಕೆ ನೀಡಿದ್ದಾರೆ. ಯಾವುದೇ ಕ್ರೈಸ್ತ ಬಾಂಧವರು ಈ ಮೆರವಣಿಗೆಯಲ್ಲಿ ಭಾಗವಹಿಸಬಾರದು ಎಂದು ಕರೆ ನೀಡಿದರು.
ಕ್ರೈಸ್ತ ಸಮುದಾಯದವರು ಶಾಂತಿ ಪ್ರಿಯರು, ಅಂತಹದರಲ್ಲಿ ಆರ್ ಎಸ್ ಎಸ್ ,ಇತರೆ ಸಂಘಟನೆಗಳ ಸಂಘರ್ಷ ನಡುವೆ ನಮ್ಮ ಧರ್ಮದವರು ಪ್ರವೇಶ ಮಾಡಿದರೆ ಸಮಾಜಕ್ಕೆ ನಮ್ಮ ಬಗ್ಗೆ ತಪ್ಪು ಕಲ್ಪನೆ ಮೂಡುತ್ತದೆ.ಹಾಗಾಗಿ ಯಾವುದೇ ಕಾರಣಕ್ಕೂ ಕ್ರೈಸ್ತ ಬಾಂಧವರು ಚಿತ್ತಾಪುರ ಪಥ ಸಂಚಲನದಲ್ಲಿ ಭಾಗವಹಿಸುವುದಿಲ್ಲ ಎಂದು ಅಖಿಲ ಭಾರತ ಕ್ರೈಸ್ತ ಮಹಾಸಭಾದ ಯುವ ಘಟಕದ ಅಧ್ಯಕ್ಷ ರಾಬರ್ಟ್ ಕ್ಲೈವ್ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಫಾದರ್ ಅರುಳ್ ಫ್ರಾಂಕ್ಲಿನ್ ಜೋಸ್, ಜಾನ್ ಫ್ರಾನ್ಸಿಸ್ ಉಪಸ್ಥಿತರಿದ್ದರು.
ವರದಿ: ಅಯ್ಯಣ್ಣ ಮಾಸ್ಟರ್




