ತುರುವೇಕೆರೆ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಇಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು. ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ತುರುವೇಕೆರೆ ತಾಲೂಕು ಅಂಗನವಾಡಿ ನೌಕರರುಗಳು ಈ ದಿನ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಅಂಗನವಾಡಿ ನೌಕರರ ಬದುಕನ್ನು ಉಳಿಸುವ ಸಂಘದ ಹಕ್ಕು, ಮುಷ್ಕರದ ಹಕ್ಕು ಹಾಗೂ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪೋಷಣ್ ಟ್ರ್ಯಾಕರ್ ಅಲ್ಲಿ ಹೊಸದಾಗಿ ಅಳವಡಿಸಿರುವ ಎಫ್.ಆರ್.ಎಸ್. ಹಾಕಲು ತಾಂತ್ರಿಕ ದೋಷವಿದೆ. ದೋಷ ಸರಿಪಡಿಸದೆ ಅಂಗನವಾಡಿ ಕಾರ್ಯಕರ್ತರೆಯರಿಗೆ ನೋಟೀಸ್ ನೀಡುತ್ತಿರುವುದು ಸರಿಯಲ್ಲ. 2018 ರಿಂದಲೂ ವೇತನ ಹೆಚ್ಚಳ ಮಾಡಿಲ್ಲ. ಕೂಡಲೇ ಅಂಗನವಾಡಿ ನೌಕರರಿಗೆ ಕನಿಷ್ಠ 26 ಸಾವಿರ ವೇತನ ಹಾಗೂ 10 ಸಾವಿರ ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ನೌಕರರನ್ನು ಖಾಯಂಗೊಳಿಸಬೇಕು. 2011 ರಿಂದ ನಿವೃತ್ತಿ ಆದ ಎಲ್ಲಾ ನೌಕರರಿಗೆ ಗ್ರಾಚ್ಯುಟಿ ನೀಡಬೇಕು. ಐಸಿಡಿಎಸ್ ಯೋಜನೆಗೆ ಅನುದಾನ ಹೆಚ್ಚಿಸಬೇಕು, ಬೆಲೆ ಏರಿಕೆ ನಿಯಂತ್ರಿಸಬೇಕು. ಕೃಷಿ ಸಾಮಗ್ರಿ ಮುಂತಾದ ವಸ್ತುಗಳ ಮೇಲಿನ ಜಿ.ಎಸ್.ಟಿ. ತೆಗೆಯಬೇಕು. ದಿನನಿತ್ಯ ಬಳಸುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲಿನ ಕೇಂದ್ರೀಯ ಅಬಕಾರಿ ಸುಂಕ ಇಳಿಸಬೇಕು. ಮೀಟರ್ ತಿದ್ದುಪಡಿ 2022 ಅನ್ನು ವಾಪಸ್ ಪಡೆಯಬೇಕು. ವಿದ್ಯುತ್ ಖಾಸಗೀಕರಣ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು. ದಿನದ ಕೆಲಸದ ಅವಧಿ 12 ಗಂಟೆಗೆ ವಿಸ್ತರಣೆ ಹಾಗೂ ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರ ದುಡಿಮೆಗೆ ಅವಕಾಶ ನೀಡಿ ಕಾರ್ಖಾನೆ ಕಾಯ್ದೆಗೆ ಮಾಡಿರುವ ತಿದ್ದುಪಡಿ, ನಿಶ್ಚಿತ ಕಾಲಾವಧಿ ಕಾರ್ಮಿಕ ನೇಮಕಕ್ಕೆ ಅವಕಾಶ ನೀಡುವ ಮಾದರಿ ಸ್ಥಾಯಿ ಆದೇಶಗಳ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪಟ್ಟಣದ ಶ್ರೀ ಉಡುಸಲಮ್ಮ ದೇವಿ ದೇವಸ್ಥಾನದಿಂದ ತಹಸೀಲ್ದಾರ್ ಕಛೇರಿವರೆಗೂ ಮೆರವಣಿಗೆ ನಡೆಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ ಅಂಗನವಾಡಿ ನೌಕರರು ಗ್ರೇಡ್ 2 ತಹಸೀಲ್ದಾರ್ ಸುಮತಿ, ಶಿರಸ್ತೇದಾರ್ ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕೆ.ವಸಂತಕುಮಾರಿ, ಕಾರ್ಯದರ್ಶಿ ಶೃತಿ, ಖಜಾಂಚಿ ಆಶಾರಾಣಿ, ಸಹಕಾರ್ಯದರ್ಶಿ ಲೀಲಾವತಿ, ಗಿರಿಜಾ, ಶೋಭಾ, ಸರ್ಕಲ್ ಲೀಡರ್ ಗಳಾದ ಸೌಮ್ಯ, ರತ್ನ, ರೂಪ, ವಿನುತ, ಉಮಾದೇವಿ, ತೀರ್ಥಕುಮಾರಿ, ಅನಿತ, ಗಂಗಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ: ಗಿರೀಶ್ ಕೆ ಭಟ್




