ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ವೃತ್ತದ ತಿರುವಿನಲ್ಲಿ ರಸ್ತೆ ಹದಗೆಟ್ಟಿದ್ದು ವಾಹನ ಸಂಚಾರರು, ಪಾದಚಾರಿಗಳು ಜೀವಭಯದಿಂದ ಸಂಚರಿಸುವಂತಾಗಿದೆ. ವಾರದಲ್ಲಿ ಮೂರು ದಿನ ಈ ತಿರುವಿನಲ್ಲಿ ರಿಪೇರಿ ಕಾರ್ಯ ನಡೆಯುತ್ತಲೇ ಇದ್ದು, ಪೂರ್ಣ ಪ್ರಮಾಣದಲ್ಲಿ ರಸ್ತೆ ಸರಿಯಾಗಿಲ್ಲ. ಇದರಿಂದ ಬೇಸತ್ತಿರುವ ನಾಗರೀಕರು ರಸ್ತೆ ತಿರುವಿನಲ್ಲಿ ಬಿದ್ದು ವಾಹನಗಳಿಗೆ ಸಿಲುಕಿ ಪ್ರಾಣ ಬಿಡುವ ಮುನ್ನ ರಸ್ತೆ ಸರಿಪಡಿಸಿ ಎಂದು ತಾಲ್ಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.

ದಬ್ಬೇಘಟ್ಟ ರಸ್ತೆ ಅಗಲೀಕರಣಕ್ಕೆ ಹತ್ತಾರು ಕೋಟಿ ರೂಗಳು ಸರ್ಕಾರದಿಂದ ಬಿಡುಗಡೆಯಾದರೂ ರಸ್ತೆ ಮಾತ್ರ ಅಗಲೀಕರಣವಾಗಲಿಲ್ಲ. ಜನಪ್ರತಿನಿಧಿಗಳು ರಸ್ತೆ ಅಗಲೀಕರಣ ಮಾಡಿ ಪಾದಚಾರಿಗಳಿಗೆ, ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು, ಆದರೆ ರಸ್ತೆ ಅಗಲೀಕರಣ ಮಾಡಲಿಲ್ಲ. ತಾಲ್ಲೂಕು ಪಂಚಾಯ್ತಿಯಿಂದ ಮುಂದಕ್ಕೆ ಬಸ್ ಡಿಪೋವರೆಗೆ ಅಗಲೀಕರಣದ ಡ್ರಾಮಾ ಮಾಡಿ ರಸ್ತೆಗೆ ಡಿವೈಡರ್ ಹಾಕಲಾಯಿತು. ಆದರೆ ಪ್ರಮುಖವಾಗಿ ರಸ್ತೆ ಅಗಲೀಕರಣವಾಗಬೇಕಿದ್ದ ಸ್ಥಳ ಮಾತ್ರ ಅಗಲೀಕರಣವಾಗಲಿಲ್ಲ. ಯಡಿಯೂರು, ತಿಪಟೂರು (ವೈ.ಟಿ. ರಸ್ತೆ) ಮುಖ್ಯ ರಸ್ತೆಯಿಂದ ದಬ್ಬೇಘಟ್ಟ ರಸ್ತೆಯಲ್ಲಿರುವ ಬಸ್ ನಿಲ್ದಾಣದವರೆಗೆ ಬಹುಮುಖ್ಯವಾಗಿ ರಸ್ತೆ ಅಗಲೀಕರಣವಾಗಬೇಕಿತ್ತು. ಈ ಕಾರ್ಯವನ್ನು ಮಾಡಿದ್ದರೆ ನಾಗರೀಕರು ಜನಪ್ರತಿನಿಧಿಗಳಿಗೆ ಭೇಷ್ ಎನ್ನುತ್ತಿದ್ದರು. ಆದರೆ ಈ ಕಾರ್ಯವಾಗಲೇ ಇಲ್ಲ. ಕಿರಿದಾದ ರಸ್ತೆ ಎಂದಿನಂತೆ ಮುಂದುವರೆದಿದೆ. ರಸ್ತೆಯ ತಿರುವಿನಲ್ಲಿ ಜನಸಂದಣಿ ಹೆಚ್ಚಿರುತ್ತದೆ. ಬಸ್, ಕಾರು, ದ್ವಿಚಕ್ರ ವಾಹನಗಳ ಸಂಚಾರ ದಿನೇದಿನೇ ಹೆಚ್ಚಾಗುತ್ತಿದೆ.

ಪಟ್ಟಣದಲ್ಲಿ ಪಾದಚಾರಿ ಮಾರ್ಗವೆಲ್ಲಾ ರಸ್ತೆಯ ಅಕ್ಕಪಕ್ಕವಿರುವ ಅಂಗಡಿ ಮಳಿಗೆಗಳವರು ಆಕ್ರಮಿಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿ ಪಾದಚಾರಿ ಮಾರ್ಗ ತೆರವುಗೊಳಿಸುವ ತಾಕತ್ತು ಪಟ್ಟಣ ಪಂಚಾಯ್ತಿಗೆ ಇಲ್ಲವಾಗಿದೆ. ಬೀದಿಬದಿ ವ್ಯಾಪಾರಕ್ಕಾಗಿ ಹರಾಜು ಕೂಗಿ ಗುತ್ತಿಗೆದಾರರಿಂದ ಇಂತಿಷ್ಟು ಗುತ್ತಿಗೆ ಹರಾಜು ಹಣ ಪಡೆದರಾಯಿತು ಎಂಬ ಭಾವನೆ ಪಟ್ಟಣ ಪಂಚಾಯ್ತಿಗಿದೆ. ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ಮಳಿಗೆಗಳವರು ಒತ್ತುವರಿ ಮಾಡಿಕೊಂಡಿರುವ ಪಾದಚಾರಿ ಮಾರ್ಗವನ್ನು ತೆರವುಗೊಳಿಸಿಕೊಡಬೇಕಿದೆ. ಇದಲ್ಲದೆ ವಾಹನ ಪಾರ್ಕಿಂಗ್ ಮಾಡಲು ಸೂಕ್ತ ಜಾಗ ಕಲ್ಪಿಸಬೇಕಿದೆ. ಪೊಲೀಸ್ ಇಲಾಖೆ, ಪೋಲೀಸರು ಸಂಚಾರಿ ವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ವಾಹನಗಳು ನಿಂತಿದ್ದರೂ, ಸಂಚಾರಕ್ಕೆ ತೊಂದರೆಯಾಗುತ್ತಿದ್ದರೂ ಕಂಡು ಕಾಣದಂತೆ ಸುಮ್ಮನಿರುವುದು ಪೊಲೀಸರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ದಬ್ಬೇಘಟ್ಟ ರಸ್ತೆಯಲ್ಲಿ ತಾಲೂಕು ಪಂಚಾಯ್ತಿ, ಕೃಷಿ, ಮೀನುಗಾರಿಕೆ, ತೋಟಗಾರಿಕೆ, ರೇಷ್ಮೆ ಇಲಾಖೆಗಳು, ಬಸ್ ನಿಲ್ದಾಣ, ಸಾಕಷ್ಟು ಶಾಲಾ ಕಾಲೇಜುಗಳು ಸೇರಿದಂತೆ ತಾಲೂಕಿನ ಪ್ರಥಮ ಪ್ರಜೆ ಶಾಸಕರ ಕಛೇರಿಯೂ ಇದೇ ರಸ್ತೆಯಲ್ಲಿದೆ. ತಾಲೂಕಿನ ದಂಡಾಧಿಕಾರಿಗಳಾದ ತಹಸೀಲ್ದಾರ್ ಅವರೂ ಇದೇ ರಸ್ತೆಯಲ್ಲೇ ತಮ್ಮ ಮನೆಗೆ ತೆರಳುತ್ತಾರೆ. ಯಾರೊಬ್ಬರಿಗೂ ರಸ್ತೆ ತಿರುವಿನಲ್ಲಿನ ಸಮಸ್ಯೆ ಅರಿವಿಗೆ ಬಾರದಿರುವುದು, ಬಂದರೂ ಸುಮ್ಮನಿರುವುದು ಶೋಚನೀಯ ಸಂಗತಿಯಾಗಿದೆ. ಪ್ರತಿ ಸೋಮವಾರ ತುರುವೇಕೆರೆಯಲ್ಲಿ ಸಂತೆ ನಡೆಯುತ್ತದೆ. ಸಂತೆಯ ದಿನ ಇಡೀ ತುರುವೇಕೆರೆ ಜನಸ್ತೋಮದಿಂದ ತುಂಬಿತುಳುಕುತ್ತಿರುತ್ತದೆ.
ದಬ್ಬೇಘಟ್ಟ ರಸ್ತೆಯಲ್ಲಂತೂ ಜನವೋ ಜನ. ದಬ್ಬೇಘಟ್ಟ ರಸ್ತೆ ತಿರುವಿನಲ್ಲಿ ವಿದ್ಯುತ್ ಕಂಬವೊಂದು ಇದ್ದು ಅಪಾಯಕ್ಕಾ ಆಹ್ವಾನ ನೀಡುತ್ತಿದೆ. ಕಂಬದ ಪಕ್ಕದಲ್ಲೇ ರಸ್ತೆ ಹದಗೆಟ್ಟಿದೆ. ಈ ವಿದ್ಯುತ್ ಕಂಬವನ್ನು ಸ್ಥಳಾಂತರಿಸುವ ಹಾಗೂ ರಸ್ತೆ ಸರಿಪಡಿಸುವ ಕೆಲಸವನ್ನು ತಾಲ್ಲೂಕು ಆಡಳಿತವಾಗಲೀ, ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯಾಗಲೀ ಮಾಡುತ್ತಿಲ್ಲ. ಆದರೆ ಸ್ಥಳೀಯ ಪಟ್ಟಣ ಪಂಚಾಯ್ತಿಯು ಪ್ರತಿ ಬಾರಿ ತಿರುವಿನಲ್ಲಿ ಕಲ್ಲು ಕಿತ್ತು ಬಂದಾಗ ಅದನ್ನು ತಾತ್ಕಾಲಿಕವಾಗಿ ಸರಿಪಡಿಸುತ್ತಿದೆ. ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದೆ ಎನ್ನಲಾಗಿದ್ದು, ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ತಿರುವಿನಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿದೆ. ಪ್ರಾಣ ಹೋಗಿ ಹೆಣ ಬೀಳುವ ಮೊದಲು ರಸ್ತೆ ಸರಿಪಡಿಸಬೇಕೆಂಬುದು ನಾಗರೀಕರ ಆಗ್ರಹವಾಗಿದೆ.
ವರದಿ: ಗಿರೀಶ್ ಕೆ ಭಟ್




