ಸಿರುಗುಪ್ಪ : ನಗರದ ಡ್ರೈವರ್ ಕಾಲೋನಿಯಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ವಿಜಯಪುರ, ಸಿರುಗುಪ್ಪ ವಿದ್ಯಾ ಸಂಸ್ಥೆ ಸಹಯೋಗದಲ್ಲಿ ಬಿ.ಇ.ರಾಮಯ್ಯ ಮಹಿಳಾ ಪದವಿ ಮಹಾವಿದ್ಯಾಲಯದ ವತಿಯಿಂದ ಗುರುವಾರದಂದು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರವನ್ನು ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ ವೆಂಕಟೇಶ್ ಅವರು ಉದ್ಘಾಟಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಭೀಮಲಿಂಗಪ್ಪ ಅವರು ಮಾತನಾಡಿ ದೇಶ ನನಗೇನು ಮಾಡಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ಮಾಡಿರುವೆ ಎಂಬ ಚಿಂತನೆ ನಾವೆಲ್ಲರೂ ಮಾಡಬೇಕಾಗಿದ್ದು, ಈ ನಾಡು ಮತ್ತು ಭೂಮಿಯ ಋಣವನ್ನು ತೀರಿಸಬೇಕೆಂದರೆ ನಾವು ಸ್ವಚ್ಛಂದ ಪರಿಸರವನ್ನು ಕಾಪಾಡುವುದಾಗಿದೆ ಎಂದು ತಿಳಿಸಿದರು.

ಶಾಲಾ ಮುಖ್ಯಪಾಧ್ಯಾಯಿನಿ ಶಿವಗಂಗಮ್ಮ ಮಾತನಾಡಿ ಹಿಂದುಳಿದ ಜನಾಂಗವು ವಾಸಿಸುತ್ತಿರುವ ಈ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿರುವುದು ಸದುದ್ದೇಶವಾಗಿದೆ. ಸ್ವಚ್ಛತೆಯೊಂದಿಗೆ ವಾರ್ಡಿನಲ್ಲಿ ಎಲ್ಲರಿಗೂ ಜಾಗೃತಿ ಮೂಡಿಸಬೇಕೆಂದರು. ಕಾಂಗ್ರೇಸ್ ಯುವ ಮುಖಂಡ ಬಿ.ಎಮ್.ಹರ್ಷ ನಾಯಕ ಮಾತನಾಡಿ ವಿದ್ಯಾರ್ಥಿನಿಯರಾದ ನೀವೆಲ್ಲರೂ ಸಮಾಜದ ಸ್ವಚ್ಛತೆಯ ಕಾರ್ಯದ ಜೊತೆಗೆ ನಿಮ್ಮ ಮುಂದಿನ ದಿನಗಳಲ್ಲೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು.
ಇದೇ ವೇಳೆ ಮುಖಂಡರಾದ ಜಿ.ರಾಮು, ಡಿ.ಮಲ್ಲಿಕಾರ್ಜುನ ಹಾಗೂ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




