ಉಡುಪಿ : ರಾಜಾಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ವರುಣಾರ್ಭಟ ಮುಂದುವರಿದಿದ್ದು, ಇಂದು ಜಿಲ್ಲೆಯಲ್ಲೂ ಧಾರಾಕಾರ ಮಳೆಯಿಂದ ಪ್ರವಾಹ ಉಂಟಾಗಿದೆ.
ಸಾಯಂಕಾಲ ಪಶ್ಚಿಮ ಘಟ್ಟದ ತಪ್ಪಲಿನ ಹೆಬ್ರಿಯಲ್ಲಿ ಮೇಘಸ್ಫೋಟವಾಗಿದೆ. ಇದರಿಂದ ಮುದ್ರಾಡಿ ಗ್ರಾಮದ ಬಲ್ಲಾಡಿ ಬಳಿ ಜಲಪ್ರವಾಹ ಉಂಟಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮೇಘಸ್ಫೋಟದಿಂದ ಬಮ್ಮಗುಂಡಿ ಹೊಳೆ ಉಕ್ಕಿ ಹರಿಯುತ್ತಿದ್ದು, ಈಶ್ವರನಗರ ಸಮೀಪದ ಮನೆಗಳು, ಕೃಷಿ ಜಮೀನಿಗೆ ನೀರು ನುಗ್ಗಿ ಭಾರೀ ಹಾನಿ ಉಂಟಾಗಿದೆ.
ಅಡಿಕೆ ಮರ, ತೆಂಗಿನ ತೋಟ, ರಬ್ಬರ್ ಗಿಡಗಳು ಸೇರಿದಂತೆ ರೈತರ ಹಲವು ಕೃಷಿ ಜಮೀನುಗಳು ಸಂಪೂರ್ಣ ಜಲಾವೃತವಾಗಿವೆ. ಭಾರಿ ಪ್ರವಾಹದಿಂದ ಮನೆಯ ಎದುರು ನಿಲ್ಲಿಸಿದ ಕಾರುಗಳು, 2 ಬೈಕ್ಗಳು ಪ್ರವಾಹದ ನೀರಲ್ಲಿ ಕೊಚ್ಚಿ ಹೋಗಿವೆ. ಕಬ್ಬಿನಾಲೆ ಭಾಗದ ಪರ್ವತ ಸಾಲಿನಲ್ಲೂ ಮೇಘ ಸ್ಫೋಟವಾಗಿದೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.