ಬೆಂಗಳೂರು : ಹಾಲಿನ ದರ ಹೆಚ್ಚಳ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ನಿನ್ನೆ ರಾಮನಗರದಲ್ಲಿ ಹೇಳಿದ್ದರು. ಈ ಬೆನ್ನಲ್ಲೇ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಕಿಡಿಕಾರಿದೆ.
ಇದೀಗ ಹಾಲಿನ ದರ ಹೆಚ್ಚಳ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಹಾಲಿನ ಬೆಲೆ ಹೆಚ್ಚಳ ಮಾಡಿದ ಕೂಡಲೇ ಬಿಜೆಪಿಯವರು ನಮ್ಮ ವಿರುದ್ಧ ಗಲಾಟೆ ಮಾಡುತ್ತಾರೆ.
ಹೈನುಗಾರರು ಬದುಕುವುದು ಬೇಡವೇ? ರೈತರೇ, ಹಾಲಿನ ಉತ್ಪಾದನೆ ಎಷ್ಟು ಕಷ್ಟದ ಕೆಲಸ ಎಂಬುದನ್ನು ನೀವೇ ಈ ಬಿಜೆಪಿಯವರಿಗೆ ಹೇಳಿ. ಹಾಲಿನ ದರ ಹೆಚ್ಚಳ ಮಾಡಿ ಆ ಹಣವನ್ನು ರೈತರಿಗೆ ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದವರು ಆರೋಪ ಮಾಡುತ್ತಾರೆ. ಹಾಗಾದರೆ ಮಾಗಡಿಯಲ್ಲಿ ಇಂದು ಉದ್ಘಾಟನೆಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರೂ.120 ಕೋಟಿ ಹಣ ಎಲ್ಲಿಂದ ಬಂತಪ್ಪಾ? ಎಂದು ಸಿಎಂ ಪ್ರಶ್ನಿಸಿದ್ದಾರೆ.
ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಆದೇಶ ನೀಡಿದ್ದು, ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರದ ರಚನೆ ಮಾಡಿದ್ದು ನಾನು. ಇದನ್ನು ತಮ್ಮನ್ನು ತಾವು ಒಕ್ಕಲಿಗ ನಾಯಕ ಎಂದು ಹೇಳಿಕೊಳ್ಳುವವರು ಯಾರೂ ಮಾಡಿರಲಿಲ್ಲ. ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.