ವಿಜಯಪುರ : ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆರ್ಥಿಕ ಹಾಗೂ ಸಾಮಾಜಿಕ ಸಮೀಕ್ಷೆ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ತೋರಿಸಲು ಸಿದ್ದರಾಮಯ್ಯ ನಾಟಕ ಆಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತಿದೆ. ಸಿಎಂ ಸಿದ್ದರಾಮಯ್ಯ ಮುಸ್ಲಿಂ ಪರ ಇದ್ದಾರೆ.
ಜಾತಿಗಣತಿ ಬಗ್ಗೆ ಅವರ ಸಚಿವ ಸಂಪುಟದಲ್ಲೇ ಗೊಂದಲ ಉಂಟಾಗಿದೆ. ಹೀಗಾಗಿ ಸಿದ್ದರಾಮಯ್ಯನವರು ಜಾತಿಗಣತಿಯನ್ನು ಕೈಬಿಡಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತೆ. ಕೇವಲ ಕೇಂದ್ರಕ್ಕೆ ಮಾತ್ರ ಜಾತಿಗಣತಿ ನಡೆಸಲು ಅಧಿಕಾರವಿದೆ. ರಾಜ್ಯಕ್ಕೆ ಅಧಿಕಾರವಿಲ್ಲ. ಆದರೆ ಇವರು ಸುಮ್ಮನೇ ರಾಜ್ಯದ ಜನರ ದಾರಿ ತಪ್ಪಿಸಲು ಹಾಗೂ ರಾಜ್ಯದಲ್ಲಿ ಲಿಂಗಾಯರು, ಒಕ್ಕಲಿಗರು ಕಡಿಮೆ ಇದ್ದಾರೆ ಎಂದು ತೋರಿಸಲು ಮತ್ತು ಅಲ್ಪಸಂಖ್ಯಾತ ಮುಸ್ಲಿಂರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ತೋರಿಸಲು ಷಡ್ಯಂತ್ರ ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದರು.
ಜಾತಿಗಳನ್ನು ಒಡೆಯುವ ಹುನ್ನಾರ ಕಾಂಗ್ರೆಸ್ ಸರ್ಕಾರ ಮಾಡ್ತಿದೆ. ಮುಸ್ಲಿಂ ರನ್ನು ಮುಖ್ಯ ಭೂಮಿಕೆಗೆ ತರುವುದೇ ಸಮೀಕ್ಷೆಯ ಉದ್ದೇಶ. ಇದನ್ನೂ ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಜನರ ತೆರಿಗೆ ಹಣ ಲೂಟಿ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರ ಅಥವಾ ಮುಸ್ಲಿಂ ರಾಷ್ಟ್ರ ಮಾಡಬೇಕೆಂದುಕೊಂಡಿದ್ದಾರೆ. ಈ ಸಂಚಿನ ಹಿನ್ನೆಲೆ ಇದೀಗ ಈ ರಾಜ್ಯದಲ್ಲಿ ಜಾತಿವರ್ಗೀಕರಣ ಮಾಡಿದ್ದಾರೆ.
ಆ ಜಾತಿಗಳು ನಮ್ಮ ದೇಶದಲ್ಲಿಯೇ ಇಲ್ಲ. ಭಾರತದಲ್ಲಿಯೂ ಇಲ್ಲ. ವಿಶ್ವದಲ್ಲಿಯೂ ಇಲ್ಲ. ಸೋನಿಯಾ ಮಾರ್ಗದರ್ಶನದಂತೆ ಸಿದ್ದರಾಮಯ್ಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.




