ಬೆಳಗಾವಿ: ಲಿಂಗಾಯತರ ವಿರುದ್ಧ ಸಿಎಂ ಸಿದ್ದರಾಮಯ್ಯ ಹೃದಯಹೀನರಾಗಿ ನಡೆದುಕೊಂಡಿದ್ದಾರೆ. ಅವರಿಗೆ ಅಧಿಕಾರಕ್ಕೆ ಬರಲು ನಾವೇ ಆಶೀರ್ವಾದ ಮಾಡಿದ್ದೆವು.
ಆದರೆ ಅದಕ್ಕೆ ಪ್ರತಿಯಾಗಿ ಅವರು ಈಗ ನಮ್ಮನ್ನೇ ಹೊಡೆದಿದ್ದಾರೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕಿಡಿಕಾರಿದ್ದಾರೆ.
ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಧರಣಿ ನಡೆಸಿದ ಬಳಿಕ ಮಾತನಾಡಿದ ಅವರು, ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಿದಾಗ ನಮ್ಮ ಸಮಾಜದ ಒಬ್ಬ ಶಾಸಕರು ಸಿಎಂ ಬಳಿ ಹೋಗಿ ಅದನ್ನು ನಿಲ್ಲಿಸುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ.
ಆದರೆ ಅವರು ಹೊಡೀಲಿ ಬಿಡಿ, ಅವರು ನಮ್ಮನ್ನೇ ಹೆದರಿಸುತ್ತಾರಾ? ನಮ್ಮ ಬಳಿಯೂ ಲಾಠಿ ಇದೆ ಎಂದಿದ್ದಾರೆ. ಇದನ್ನು ಶಾಸಕರೇ ಬಂದು ನನಗೆ ಹೇಳಿದ್ದಾರೆ ಎಂದು ತಿಳಿಸಿದರು.
ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದಾಗ ನಾವೆಲ್ಲ ನಿಮ್ಮ ತಲೆ ಮೇಲೆ ಹೂವು ಹಾಕಿ ಆಶೀರ್ವಾದ ಮಾಡಿದ್ದೆವು.
ಆದರೆ ಲಿಂಗಾಯತರ ಮೇಲಿನ ನಿಮ್ಮ ಧೋರಣೆ ಏನು ಎಂಬುದನ್ನು ನಮಗೆ ಈಗ ತೋರಿಸಿದ್ದೀರಿ. 2028ರಲ್ಲಿ ನಮ್ಮ ಸಮಾಜಕ್ಕೆ ಗೌರವ ಕೊಡುವ ಮುಖ್ಯಮಂತ್ರಿಯನ್ನೇ ನಾವು ಆರಿಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.