ಬೆಂಗಳೂರು: ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ನೀಡುತ್ತಿರುವಂತ ಗ್ರೇಸ್ ಮಾರ್ಕ್ ಅನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ರದ್ದು ಮಾಡುವಂತೆ ಸಿಎಂ ಸಿದ್ಧರಾಮಯ್ಯ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಯಿತು.
ಈ ಸಭೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ 20 ಗ್ರೇಸ್ ಮಾರ್ಕ್ಸ್ ನೀಡಿದ್ದರ ಬಗ್ಗೆ ಆಕ್ಷೇಪ ವ್ಯಕ್ತವಾಗಿರುವ ಬಗ್ಗೆ ಚರ್ಚೆ ನಡೆಯಿತು.
ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಯಾವ ಕಾರಣ ಮತ್ತು ಉದ್ದೇಶದಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ 20 ಗ್ರೇಸ್ ಮಾರ್ಕ್ಸ್ ನೀಡಿದ್ದೀರಿ? ಗ್ರೇಸ್ ಮಾರ್ಕ್ಸ್ ನೀಡಲು ಯಾರು ಹೇಳಿದ್ದು ಎಂಬುದಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಡಿಸಿಎಂ ಮಾತಿಗೆ ಸಿಎಂ ಸಿದ್ಧರಾಮಯ್ಯ ಕೂಡ ಸಹಮತ ವ್ಯಕ್ತ ಪಡಿಸಿದರು.
ವಿದ್ಯಾರ್ಥಿಗಳು ಅವರ ಅರ್ಹತೆ ಆಧಾರದಲ್ಲಿ ಪ್ರಗತಿ ಸಾಧಿಸಬೇಕು. ಗ್ರೇಸ್ ಮಾರ್ಕ್ಸ್ ನೀಡಿದರೇ ಸ್ಪರ್ಧಾ ಸಾಮರ್ಥ್ಯ ಕಡಿಮೆ ಆಗಲಿದೆ. ಕಡಿಮೆ ಅಂಕ ಪಡೆದರೇ ವಿದ್ಯಾರ್ಥಿ ಅಸಮರ್ಥತೆ ಪ್ರಶ್ನೆಯೇ ಎಂದು ಕೇಳಿದರು.
ಇದೇ ಸಂದರ್ಭದಲ್ಲಿ ತಾವು ಎಸ್ ಎಸ್ ಎಲ್ ಸಿಯಲ್ಲಿ ಪಡೆದಂತ ಅಂಕದ ಬಗ್ಗೆ ಪ್ರಸ್ತಾಪಿಸಿದಂತ ಡಿಸಿಎಂ ಡಿ.ಕೆ ಶಿವಕುಮಾರ್, ನಾನು ಎಸ್ ಎಸ್ ಎಲ್ ಸಿಯಲ್ಲಿ 400 ಅಂಕ ಪಡೆದಿದ್ದೇನೆ. ಹಾಗಾದ್ರೆ ಅಸಮರ್ಥ ಅಂತೀರಾ ಎಂದರು.
ಡಿಸಿಎಂ ಮಾತಿಗೆ ಉತ್ತರಿಸಿದಂತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೋವಿಡ್ ಸಂದರ್ಭದಲ್ಲಿ 5 ರಿಂದ 10 ಗ್ರೇಸ್ ಮಾರ್ಕ್ಸ್ ಕೊಡುತ್ತಿದ್ದವೆ ಎಂದರು.
ಆಗ ಸಿಎಂ ಸಿದ್ಧರಾಮಯ್ಯ ಮುಂದಿನ ವರ್ಷದಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ನೀಡುತ್ತಿರುವಂತ ಗ್ರೇಸ್ ಮಾರ್ಕ್ಸ್ ರದ್ದು ಮಾಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದರು.