ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ 16 ನೇ ರಾಜ್ಯ ಬಜೆಟ್ ಅನ್ನು ಮಂಡಿಸಿದ್ದಾರೆ. ಬಜೆಟ್ ಮಂಡನೆಯ ಬಳಿಕ ವಿಪಕ್ಷಗಳು ಭಾರೀ ಟೀಕೆ ವ್ಯಕ್ತಪಡಿಸಿವೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಮಂಡಿಸಿರುವುದು ಪಾಕಿಸ್ತಾನದ ಬಜೆಟ್ ಅಥವಾ ಕರ್ನಾಟಕದ ಬಜೆಟಾ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ.
ಬಜೆಟ್ ಮಂಡನೆ ಬಳಿಕ ಮಾತನಾಡಿದ ಅವರು, ಇದು ಸಿದ್ದರಾಮಯ್ಯ ಅವರದ್ದು ಅಲ್ಲ, ಬದಲಾಗಿ ಜಮೀರ್ ಅವರ ಬಜೆಟ್ ಆಗಿದೆ. ಕೋಮುಗಲಭೆ ಎಬ್ಬಿಸುವ ಬಜೆಟ್ ಇದಾಗಿದೆ. ಅಲ್ಪಸಂಖ್ಯಾತರಿಗೆ ಬಜೆಟ್ ನಲ್ಲಿ ಸಾಕಷ್ಟು ಕೊಡುಗೆ ನೀಡಿದ್ದು, ದಲಿತರಿಗೆ ಏನೂ ಇಲ್ಲ ಎಂದು ಆರೋಪಿಸಿದ ಅವರು, ನೀರಾವರಿಗೆ ಎಷ್ಟು ಹಣ ಎಂದು ಹೇಳಿಲ್ಲ, ಕೇವಲ ಗ್ಯಾರಂಟಿ ಸಲುವಾಗಿ 1.16 ಲಕ್ಷ ಕೋಟಿ ಸಾಲ ಎಂದಿದ್ದಾರೆ ಅಂತ ಟೀಕಿಸಿದರು.
ಸಿದ್ದರಾಮಯ್ಯ ಅವರ ಬಜೆಟ್ 3.30 ತಾಸುಗಳ ಕಾಲ ಮಂಡನೆ ಮಾಡಲಾಗಿದೆ. ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಏನೇನೂ ಇಲ್ಲ. ಬಯಲು ಸೀಮೆ ಕಡೆಗೆ 25 ಕೋಟಿ ಕೊಡಲಾಗಿದೆ. ವಕ್ಫ್ ಗೆ 125 ಕೋಟಿ ಕೊಡಲಾಗಿದೆ. ಒಟ್ಟಿನಲ್ಲಿ ಇದು ಸಿದ್ದರಾಮಯ್ಯ ಅವರ ನಿರ್ಗಮನದ ಬಜೆಟ್ ಇದಾಗಿದೆ ಎಂದು ವಾಗ್ದಾಳಿ ನಡೆಸಿದರು.




