ನಿಪ್ಪಾಣಿ: ಬೋರಗಾವ, ಮಾನಕಾಪೂರ, ಕಾರದಗಾ ಸೇರಿ ನಿಪ್ಪಾಣಿ ತಾಲೂಕಿನ ಗಡಿಭಾಗದ ಹಳ್ಳಿಗಳಲ್ಲಿ ನೇಕಾರರ ಮೇಲೆ ಕಳೆದ ಅನೇಕ ವರ್ಷಗಳಿಂದ ಅನ್ಯಾಯವಾಗುತ್ತಿದ್ದು ಹೆಚ್ಚಾದ ವಿದ್ಯುತ್ ಬಿಲ್ ಗಳಿಂದಾಗಿ ನೇಕಾರರ ವ್ಯವಸಾಯದ ಮೇಲೆ ಅನೇಕ ಸಂಕಟಗಳು ಎದುರಾಗುತ್ತಿವೆ. ಮಾರುಕಟ್ಟೆಯಲ್ಲಿ ಬಟ್ಟೆಗೆ ಬೆಲೆ ಇಲ್ಲದೆ ನೇಕಾರರು ಉತ್ಪಾದಿಸಿದ ಬಟ್ಟೆ ಮಾರಾಟವಾಗದೆ ಸಕಾಲಕ್ಕೆ ಹೆಚ್ಚಾದ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗದೇ ಬೀದಿಗೆ ಬಂದಿದ್ದಾರೆ. ಅನೇಕ ನೇಕಾರರು ಕೆಲಸವಿಲ್ಲದೆ ತಮ್ಮ ಯಂತ್ರ ಮಗ್ಗುಗಳನ್ನು ಕಬ್ಬಿಣದ ದರದಲ್ಲಿ ಮಾರಾಟ ಮಾಡುವ ಪ್ರಸಂಗ ಬಂದಿದ್ದು ನೇಕಾರರ ಮೇಲೆ ಸರ್ಕಾರ ಹೇರಿದ ಅತಿಯಾದ ವಿದ್ಯುತ್ ಬಿಲ್ ಹಾಗೂ ಕಟಬಾಕಿಯನ್ನು ಮನ್ನಾ ಮಾಡಬೇಕೆಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಅಣ್ಣಾಸಾಹೇಬ ಹವಲೆಯವರು ಶಾಸಕ ಗಣೇಶ ಹುಕ್ಕೇರಿಯವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಪತ್ರ ಅರ್ಪಿಸಿದರು.
ಚಿಕ್ಕೋಡಿಯಲ್ಲಿ ಆಗಮಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಸಂಪರ್ಕಿಸಿ ಮನವಿ ಸಲ್ಲಿಸಿದ್ದರಿಂದ ನೇಕಾರರಲ್ಲಿ ಮತ್ತೆ ಪುನಶ್ಚೇತನ ಉಂಟಾಗಿದ್ದು ಮುಖ್ಯಮಂತ್ರಿಗಳು ಸಹ ಮನವಿ ಸ್ವೀಕರಿಸಿ ಆದಷ್ಟು ಬೇಗ ನೇಕಾರರ ಸಮಸ್ಯೆಯನ್ನು ಬಗೆಹರಿಸಲಾಗುವುದೆಂದು ತಿಳಿಸಿದ್ದರಿಂದ ಕಳೆದ ಅನೇಕ ವರ್ಷಗಳಿಂದ ಬಂದಾಗಿದ್ದ ಯಂತ್ರ ಮಗ್ಗುಗಳಿಗೆ ಪುನಹ ಚಾಲನೆ ದೊರೆಯಲಿದೆ.
ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ ಅರ್ಜುನ ಕುಂಬಾರ, ಬಾವುಸಾಬ ಬಂಕಾಪುರೇ ಅಶೋಕ್ ಹವಲೆ ಶಿವಪ್ಪ ಮಾಳಗೆ ಭಾವುಸಾಹೇಬ ಪಾಟೀಲ ವಿದ್ಯಾಧರ ಅಮ್ಮನ್ನವರ ಮಹದೇವ್ ಸ್ವಾಮಿ, ಜೀವಂಧರ ಕಾರವತೆ, ಧನಪಾಲ ಹವಲೆ, ಸೇರಿದಂತೆ ಮಾನಕಾಪುರ, ಬೋರಾಗಾವ ಪರಿಸರದ ನೇಕಾರರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ