ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು 4 ಲಕ್ಷ ಕೋಟಿಗೂ ಅಧಿಕ ಗಾತ್ರದ 2025-26ನೇಸಾಲಿನ ಬಜೆಟ್ ಅನ್ನು ಮಂಡಿಸಿದರು. 16ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ದಾಖಲೆ ಮಾಡಿರುವ ಸಿದ್ಧರಾಮಯ್ಯ ಯಾವುದೇ ಜನಪ್ರಿಯ ಹೊಸ ಕಾರ್ಯಕ್ರಮಗಳ ಬೆನ್ನು ಬೀಳದ ಅಭಿವೃದ್ಧಿ ಕೇಂದ್ರಿತ ಆಯವ್ಯಯ ಮಂಡಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ತಮ್ಮ ಮೊಣಕಾಲಿನ ನೋವಿನ ನಡುವೆಯೂ ಆರಂಭದಲ್ಲಿ ನಿಂತು ಬಜೆಟ್ ಭಾಷಣ ಆರಂಭಿಸಿದ ಅವರು, ಅನಂತರ ಸಭಾಧ್ಯಕ್ಷರ ಅನುಮತಿ ಮೇರೆಗೆ ಕುಳಿತುಕೊಂಡು ಬಜೆಟ್ ಪ್ರತಿಯನ್ನು ಓದಲಾರಂಭಿಸಿದರು. ಶಿಕ್ಷಣ, ಆರೋಗ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸ್ವಾಸ್ಥ್ಯ ಕರ್ನಾಟಕ ನಿರ್ಮಾಣದ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ರೈತ ಕಲ್ಯಾಣ ಉದ್ದೇಶಿತ ಯೋಜನೆಗಳಿಗೆ ಕಳೆದ ವರ್ಷ 44 ಸಾವಿರ ಕೋಟಿ ರೂ. ಒದಗಿಸಿದ್ದರೆ ಪ್ರಸಕ್ತ ಸಾಲಿನ 51,339 ಕೋಟಿ ರೂ. ನೀಡಲಾಗಿದೆ. ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಯೋಜನೆಗಳಿಗಾಗಿ 13,692 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ.
ಪ್ರತೀ ಬಾರಿಯಂತೆ ಈ ವರ್ಷವೂ ಕೂಡ ಸಿದ್ದರಾಮಯ್ಯನವರು ತಮ್ಮ ಬಜೆಟ್‌ನಲ್ಲಿ ಕೇಂದ್ರದಿಂದ ತೆರಿಗೆ ಅನ್ಯಾಯವಾಗಿದೆ ಎಂಬುದನ್ನು ಪ್ರಸ್ತಾಪಿಸಿದ್ದಾರೆ.




