ಅಂಕೋಲಾ: ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಸಂಭವಿಸಿತ್ತು.
ರಸ್ತೆಯ ಮೇಲೆ ಬಿದ್ದಿರುವ ಗುಡ್ಡದ ಅವಶೇಷಗಳಡಿ ಲಾರಿಗಳು ಹಾಗೂ ಹಲವರು ಸಿಲುಕಿಕೊಂಡಿದ್ದು, ಗುಡ್ಡ ಕುಸಿತದ ರಭಸಕ್ಕೆ ಗಂಗಾವಳಿ ನದಿಗೆ ಬಿದ್ದು ಕೊಚ್ಚಿ ಹೋಗಿದ್ದ 7 ಜನರ ಮೃತದೇಹಗಳು ಪತ್ತೆಯಾಗಿವೆ. ಒಂದು ಗ್ಯಾಸ್ ಟ್ಯಾಂಕರ್ ನ್ನು ಮೇಲಕೆತ್ತಲಾಗಿದೆ.
ಕಳೆದ 6 ದಿನಗಳಿಂದ ಹೆದ್ದಾರಿಯಲ್ಲಿನ ಮಣ್ಣು ತೆರವು ಕಾರ್ಯ ನಡೆಯುತ್ತಲೇ ಇದೆ. ಆದರೆ ಮಳೆ ನಡುವೆ ಮಣ್ಣು ತೆರವು ವಿಳಂಬವಾಗುತ್ತಿದೆ. ಈ ನಡುವೆ ಘಟನಾ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ, ಖುದ್ದು ಪರಿಶೀಲನೆ ನಡೆಸಿದ್ದಾರೆ.
ಭಾರಿ ಮಳೆಯ ನಡುವೆಯೇ ಸಿಎಂ ಸಿದ್ದರಾಮಯ್ಯ ಶಿರೂರು ಗುಡ್ಡ ಕುಸಿತದ ಸ್ಥಳಕ್ಕೆ ಭೇಟಿ ನೀಡಿದ್ದು, ಮಣ್ಣು ತೆರವು, ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದ್ದಾರೆ. ಅಲ್ಲದೇ ಸಂತ್ರಸ್ತರ ಸಂಕಷ್ಟ ಆಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಸಚಿವರಾದ ಕೃಷ್ಣಬೈರೇಗೌಡ, ಮಂಕಾಳು ವೈದ್ಯ, ಶಾಸಕ ಸತೀಶ್ ಸೈಲ್ ಸಾಥ್ ನೀಡಿದ್ದಾರೆ.