ಬೆಂಗಳೂರು: ಸೋಪ್ ಬಾಕ್ಸ್‌ನಲ್ಲಿ ಕೊಕೇನ್ ಸ್ಮಗ್ಲಿಂಗ್ ಮಾಡುತ್ತಿದ್ದ ಇಬ್ಬರು ವಿದೇಶಿ ಮಹಿಳೆಯರು ಡಿಆರ್‌ಐ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಬಂಧಿತರನ್ನು ಮಣಿಪುರದ ಲಾಲ್ಜಮ್ಲುವೈ ಮತ್ತು ಮಿಜೋರಾಂನ ಲಾಲ್‌ಥಾಂಗ್ಲಿಯಾನಿ ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 14.69 ಕೋಟಿ ರೂ.ಮೌಲ್ಯದ 7 ಕೆ.ಜಿ ಕೊಕೇನ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಇಬ್ಬರು ಮಹಿಳೆಯರು ಬೆಂಗಳೂರಿನ ಕಾಟನ್‌ಪೇಟೆಯಲ್ಲಿ ಕೊಕೇನ್ ಸಾಗಿಸುತ್ತಿದ್ದ ವೇಳೆ ಡಿಆರ್‌ಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಏರ್‌ಪೋರ್ಟ್‌ನಲ್ಲಿ ಓರ್ವ ಅರೆಸ್ಟ್: ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 40 ಕೋಟಿ ಮೌಲ್ಯದ 4 ಕೆ.ಜಿಗೂ ಹೆಚ್ಚು ಕೊಕೇನ್ ಅನ್ನು ಡಿಆರ್‌ಐ ಅಧಿಕಾರಿಗಳು ಸೀಜ್ ಮಾಡಿದ್ದು, ಪ್ರಯಾಣಿಕನೊಬ್ಬನನ್ನು ಬಂಧಿಸಿದ್ದರು.
ಭಾರತೀಯ ಮೂಲದ ಪ್ರಯಾಣಿಕ ನಿನ್ನೆ (ಜುಲೈ 18) ದೋಹಾದಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದ್ದ. ಈತನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಬೆಂಗಳೂರು ವಲಯ ಘಟಕವು ತಡೆಹಿಡಿದಿದೆ ಎಂದು ಹಣಕಾಸು ಸಚಿವಾಲಯವು ಇಂದು ತಿಳಿಸಿತ್ತು.
ಡಿಆರ್‌ಐ ಅಧಿಕಾರಿಗಳು ಪ್ರಯಾಣಿಕನ ಬ್ಯಾಗೇಜ್ ತಪಾಸಣೆ ನಡೆಸಿದ ವೇಳೆ ಬಳಕೆ ಮಾಡದ ಎರಡು ಸೂಪರ್ ಹೀರೋ ಕಾಮಿಕ್ಸ್/ಮ್ಯಾಗಜೀನ್ಸ್ ಪತ್ತೆಯಾಗಿದೆ. ಈ ಮ್ಯಾಗಜೀನ್ ಕವರ್ ಮೇಲೆ ಸೀಲ್ ಮಾಡಿದ ರೀತಿಯಲ್ಲಿ ಕೊಕೇನ್ ಪೌಡರ್ ಪತ್ತೆಯಾಗಿದ್ದು, ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಈ ಬಿಳಿ ಬಣ್ಣದ ಪೌಡರ್ ಅನ್ನು ಅಧಿಕಾರಿಗಳು ಪರೀಕ್ಷೆಗೆ ಒಳಪಡಿಸಿದ್ದು, ಕೊಕೇನ್ ಎಂಬುದು ದೃಢವಾಗಿತ್ತು.
ಈ ಸಂಬಂಧ ಸಚಿವಾಲಯವು 4,006 ಗ್ರಾಂ (4 ಕೆ.ಜಿಗಿಂತ ಹೆಚ್ಚು) ತೂಕದ ಮತ್ತು ಸುಮಾರು 40 ಕೋಟಿ ರೂ. ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯದ ಕೊಕೇನ್ ಅನ್ನು NDPS ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿತ್ತು.
ಡಿಆರ್‌ಐ ಅಧಿಕಾರಿಗಳು ಎನ್‌ಡಿಪಿಎಸ್ ಆಕ್ಟ್ ಅಡಿಯಲ್ಲಿ ಪ್ರಯಾಣಿಕನನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.




