ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಸಂಭ್ರಮಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿ ಹಲವರು ಅಧಿಕಾರಿಗಳ ಈಗಾಗಲೇ ತಲೆದಂಡವಾಗಿದೆ.
ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಎಂಎಲ್ಸಿ ಗೋವಿಂದ ರಾಜುಗೂ ಕೋಕ್ ಕೊಡಲಾಗಿದೆ. ಇದರೊಂದಿಗೆ ಕಾಲ್ತುಳಿತ ಪ್ರಕರಣದಲ್ಲಿ 8ನೇ ತಲೆದಂಡವಾದಂತಾಗಿದೆ.
ಇದಲ್ಲದೇ ಗುಪ್ತಚರ ಇಲಾಖೆಯ ಎಡಿಜಿಪಿ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಎಡಿಜಿಪಿ ಹೇಮಂತ್ ನಿಂಬಾಳ್ಕರ್ರನ್ನು ಎತ್ತಂಗಡಿ ಮಾಡಲಾಗಿದೆ. ಅವರ ಸ್ಥಾನಕ್ಕೆ ಎಸ್ ರವಿ ಅವರನ್ನು ನೇಮಿಸಲಾಗಿದೆ.
ನಿನ್ನೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಗುಪ್ತಚರ ವೈಫಲ್ಯವಾಗಿದೆ ಎಂದು ಹೇಳಿದ್ದರು. ಜೊತೆಗೆ ಒತ್ತಡ ಹೆಚ್ಚಾಗಿದ್ದರಿಂದ ಹೇಮಂತ್ ನಿಂಬಾಳ್ಕರ್ರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಸ್ಥಳ ತೋರಿಸದೇ ಹಿರಿಯ ಅಧಿಕಾರಿಯ ವರ್ಗಾವಣೆ ಮಾಡಲಾಗಿದೆ.
ಕಾಲ್ತುಳಿತಕ್ಕೆ ಗುಪ್ತಚರ ಇಲಾಖೆ ವೈಫಲ್ಯ ಕಾರಣ ಎಂದು ಸಿಎಂ ಒಪ್ಪಿಕೊಂಡಿದ್ದರು. ಸಿಎಂ ಮಾತು ಸತ್ಯ ಎಂದು ಬಿಜೆಪಿ ಹೇಳಿತ್ತು.
ಗುಪ್ತಚರ ಇಲಾಖೆಯ ಅಧಿಕಾರಿಗಳನ್ನು ಯಾಕೆ ಮುಟ್ಟಿಲ್ಲ? ಗುಪ್ತಚರ ಇಲಾಖೆ ಖಾತೆ ಸಿಎಂ ಬಳಿಯೇ ಇದೆ. ಹೀಗೆ ಮುಂದುವರಿದರೆ ಸಿಎಂ ಬುಡಕ್ಕೂ ಬರುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿಕಾರಿದ್ದ ರು.




