ಮೈಸೂರು : ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ಇಂಜೆಕ್ಟ್ ಮಾಡಲಾಗುತ್ತದೆ ಎಂಬ ವದಂತಿ ಹಿನ್ನೆಲೆ ಈ ಹಣ್ಣಿಗೆ ಬೇಡಿಕೆ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಕಲ್ಲಂಗಡಿ ಹಣ್ಣಿನ ಸ್ಟಾಲ್ಗಳು ಹೆಚ್ಚಿದ್ದು, ತಿನ್ನುವವರ ಸಂಖ್ಯೆ ಕಡಿಮೆಯಾಗಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಗ್ರಾಹಕರಿಗೆ, ವ್ಯಾಪಾರಿಗಳು ಹಾಗೂ ರೈತರು ಅವುಗಳೆಲ್ಲ ಸುಳ್ಳು ಸುದ್ದಿ ಎಂದು ಕಿವಿ ಮಾತು ಹೇಳಿದ್ದಾರೆ.
ಕಲ್ಲಂಗಡಿ ಹಣ್ಣಿಗೆ ಸೂಜಿಯಿಂದ ಚುಚ್ಚಿದರೂ ಒಂದು ದಿನದಲ್ಲಿ ಹಾಳಾಗುತ್ತೆ, ಈ ವದಂತಿಯಿಂದಾಗಿ ನಮ್ಮ ವ್ಯಾಪಾರ ಕಡಿಮೆಯಾಗಿದೆ. ಒಂದು ಲೋಡ್ ಖಾಲಿಯಾಗಲು ವಾರ ಬೇಕಾಗಿದೆ. ಇಲ್ಲಿ ನಮಗೆ ವ್ಯಾಪಾರವಾಗದಿದ್ದರೆ ನಾವು ರೈತರಿಂದ ಖರೀದಿಸುವುದಿಲ್ಲ. ಹೀಗಾಗಿ ಅವರಿಗೂ ನಷ್ಟವಾಗಿದೆ. ನಮಗೆ ತಮಿಳುನಾಡು, ಆಂಧ್ರದಿಂದ ಬರುತ್ತೆ, ಇಲ್ಲಿಂದ ಕೇರಳಕ್ಕೂ ಕಳುಹಿಸುತ್ತೇವೆ. ಈಗ ವದಂತಿಯಿಂದಾಗಿ ವ್ಯಾಪಾರ ಇಲ್ಲದಂತಾಗಿದೆ ಎಂದು ವ್ಯಾಪಾರಿಯೊಬ್ಬರು ಹೇಳುತ್ತಾರೆ.
ಕಲ್ಲಂಗಡಿ ನಮಗೆ ಸಿಗುತ್ತಿದೆ. ಆದರೆ ಇಂಜೆಕ್ಷನ್ ವದಂತಿಯಿಂದಾಗಿ ತಿನ್ನುವವರು ಕಡಿಮೆಯಾಗಿದ್ದಾರೆ. ತಮಿಳುನಾಡು, ಆಂಧ್ರ , ಮೈಸೂರು ಸುತ್ತಾಮುತ್ತ ಪ್ರದೇಶಗಳಿಂದ ಹಣ್ಣು ಬರುತ್ತದೆ. ಒಂದು ವಾರದಿಂದ ವ್ಯಾಪಾರ ಕಡಿಮೆಯಾಗಿದೆ. ಈಗ ಎರಡು ಮೂರು ದಿನದಿಂದ ವ್ಯಾಪಾರ ಚೆನ್ನಾಗಿದೆ. ನಮಗಿಂತ ರೈತರಿಗೆ ತೊಂದರೆಯಾಗಿದೆ ಎಂದು ಇನ್ನೋರ್ವ ವ್ಯಾಪಾರಿ ಹೇಳುತ್ತಾರೆ.
ವಿನಂತಿ : ಅನ್ನಕ್ಕೆ ವಿಷ ಹಾಕುವ ಕೆಲಸವನ್ನು ರೈತರು ಮಾಡುವುದಿಲ್ಲ. ದೇಶಕ್ಕೆ ಆಹಾರ ನೀಡುವವರು ರೈತರು ಎಂಬುದನ್ನ ಹೆಮ್ಮೆಯಿಂದ ಹೇಳುತ್ತೇನೆ. ನಾವು ಗೊಬ್ಬರಗಳನ್ನ ಹಾಕಿರುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯಲ್ಲಿ ವದಂತಿ ಹಬ್ಬಿಸಿ, ರೈತರಿಗೆ ತೊಂದರೆ ಕೊಟ್ಟರೆ ಯಾವ ದೇವರೂ ನಿಮ್ಮನ್ನು ಕ್ಷಮಿಸಲ್ಲ ಎಂದು ರೈತರೊಬ್ಬರು ಹೇಳಿದ್ದಾರೆ.