ಬೆಳಗಾವಿ: ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಿ ಕಪ್ಪುಬಟ್ಟೆ ಪ್ರದರ್ಶನ ಮಾಡಿದ ಬಿಜೆಪಿಯ ಆರು ಮಹಿಳಾ ಕಾರ್ಯಕರ್ತೆಯರ ವಿರುದ್ಧ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಪ್ಪು ಬಟ್ಟೆ ಪ್ರದರ್ಶಿಸಿದ್ದು ಅಲ್ಲದೇ ಸಮಾವೇಶದ ವೇದಿಕೆಯತ್ತ ನುಗ್ಗಲು ಯತ್ನಿಸಿದ ಬಿಜೆಪಿಯ ಶಿಲ್ಪಾ ಕೇಕರೆ, ಪವಿತ್ರಾ ಹಿರೇಮಠ, ರೇಷ್ಮಾ ಬರಮೂಚೆ, ಮಂಜುಳಾ ಹಣ್ಣೀಕೇರಿ, ಅನ್ನಪೂರ್ಣಾ ಹವಳ ಮತ್ತು ಸುಮಿತ್ರಾ ಜಾಲಗಾರ ವಿರುದ್ಧ ಬಿಎನ್‌ಎಸ್ 189(1)(C), ಬಿಎನ್ಎಸ್ 352 ಅಡಿ ಪ್ರಕರಣ ದಾಖಲಾಗಿತ್ತು.
ಸಮಾವೇಶದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದ್ದರಿಂದ ತಕ್ಷಣವೇ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ನಡೆಸಲು ಅವರನ್ನು ಕರೆ ತಂದಿದ್ದರು. ಇಲ್ಲಿಯ ವೈದ್ಯರು ತಪಾಸಣೆ ನಡೆಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಯಿತು.
ಪ್ರಕರಣ ದಾಖಲಾಗುತ್ತಿದ್ದಂತೆ ಬಿಜೆಪಿ ನಾಯಕರು ಜಾಮೀನಿಗೆ ಅರ್ಜಿ ಸಲ್ಲಿಸಿದರು. ಬೆಳಗಾವಿಯ ಐದನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಸ್ಪರ್ಷಾ ಡಿಸೋಜಾ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತೆಯರ ಪರ ವಿನೋದ್ ಕುಮಾರ್ ಪಾಟೀಲ್, ಧನ್ಯಕುಮಾರ್ ಪಾಟೀಲ್ ವಕಾಲತ್ತು ವಹಿಸಿದ್ದರು.