ಬೆಂಗಳೂರು : ಅಗತ್ಯವಸ್ತುಗಳ ಬೆಲೆ ಏರಿಕೆ, ತೆರಿಗೆ ಹೆಚ್ಚಳನ್ನು ಮಾತ್ರ ರಾಜ್ಯ ಕಾಂಗ್ರೆಸ್ ಮಾಡುತ್ತಿಲ್ಲ ದುರಾಡಳಿತ, ಭ್ರಷ್ಟಾಚಾರದಿಂದ ಇಡೀ ರಾಜ್ಯವನ್ನು ಸರ್ವನಾಶ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗುಡುಗಿದರು.
ಬೆಲೆ ಏರಿಕೆ ವಿರೋಧಿಸಿ ಇಂದು ನಗರದ ಫ್ರೀಡಂ ಪಾರ್ಕ್ನಲ್ಲಿ ಜೆಡಿಎಸ್ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಹೆಚ್ಡಿಕೆ, ರಾಜ್ಯದ ಜನರ ಬಗ್ಗೆ ಸರ್ಕಾರಕ್ಕೆ ಭಯ-ಭಕ್ತಿ ಇಲ್ಲ.
ಕೆಂಪೇಗೌಡರು ಕಟ್ಟಿದ ಬೆಂಗಳೂರೂ ನಾಶವಾಗುತ್ತಿದೆ. ಜನರ ತಲೆಯ ಮೇಲೆ ಸಾಲದ ಹೊರೆ ಸರ್ಕಾರದವರು ಕಟ್ಟುತ್ತಿದ್ದಾರೆ. ಸರ್ಕಾರದ ಭ್ರಷ್ಟಾಚಾರದ ಬಗ್ಗೆ ದಾಖಲೆ ಇದೆ ಎಂದು ನಾನು ಸುಮ್ಮನೇ ಹೇಳಿಲ್ಲ.
ಮನೆಯಂಗಳದಲ್ಲಿ ಕಾರು ನಿಲ್ಲಿಸಿದರೂ ಟ್ಯಾಕ್ಸ್ ಕಟ್ಟಬೇಕಾ? ಜನಸಾಮಾನ್ಯರ ಮೇಲೆ ಯಾವ ಮಟ್ಟಕ್ಕೆ ತೆರಿಗೆ ವಿಧಿಸುತ್ತಿದ್ದೀರಿ? ನನ್ನ ಧ್ವನಿಯನ್ನು ಬಂದ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಇನ್ನು ಇದೇ ವೇಳೆ ಜೆಡಿಎಸ್ ರಾಜ್ಯ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಸರ್ಕಾರವು ಕೋಟಿ ಕೋಟಿ ರೂಪಾಯಿ ಸಾಲ ಮಾಡಿ, ಜನರ ಮೇಲೆ ಬೆಲೆ ಏರಿಕೆಯ ಹೊರೆಯನ್ನು ಹಾಕುತ್ತಿದೆ. ಯಾವ ಕಾರಣಕ್ಕೆ ಸರ್ಕಾರ ಸಾಲ ಮಾಡಿದೆ ಎಂದು ಉತ್ತರಿಸಲಿ ಎಂದು ಒತ್ತಾಯಿಸಿದರು.
ರಸ್ತೆ, ಚರಂಡಿ, ಗ್ರಾಮೀಣ ಭಾಗದ ಅಭಿವೃದ್ಧಿ, ಮೂಲಭೂತ ಸೌಕರ್ಯ ಒದಗಿಸಲು ಸಾಲ ಮಾಡಿದ್ದೇ ಆದಲ್ಲಿ ಉತ್ತರ ನೀಡಲಿ. ಅಭಿವೃದ್ಧಿಗೆ ಹಣವಿಲ್ಲ ಅಂತಾ ನಿಮ್ಮ ಪಕ್ಷದ ಸಚಿವರೇ ಹೇಳುತ್ತಿದ್ದಾರೆ.
ಹೀಗಿರುವಾಗ ಯಾವ ಕಾರಣಕ್ಕೆ ಸಾಲ ಮಾಡಿದ್ದೀರಿ? ಸಾವಿರಾರು ಕೋಟಿ ದುಡ್ಡನ್ನು ಏತಕ್ಕೆ ಬಳಕೆ ಮಾಡಿದ್ದೀರಿ ಎಂದು ರಾಜ್ಯದ ಜನರಿಗೆ ಸರ್ಕಾರ ಮಾಹಿತಿ ನೀಡಬೇಕು ಎಂದು ನಿಖಿಲ್ ಆಗ್ರಹಿಸಿದರು.