ಬೆಳಗಾವಿ : ಎರಡನೇ ಬಾರಿ ನಾನು ಮುಖ್ಯಮಂತ್ರಿಯಾಗಿದ್ದು, ನನ್ನನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಬಿಜೆಪಿಯವರು 9 ವರ್ಷದಲ್ಲಿ 5 ಜನ ಮುಖ್ಯಮಂತ್ರಿಗಳಾಗಿದ್ದರು. ಬಿಜೆಪಿಯ ಹುಳಿಹಿಂಡುವ ಪ್ರಯತ್ನ ಸಫಲವಾಗುವುದಿಲ್ಲ. ನಮ್ಮ ಸರ್ಕಾರ ಗಟ್ಟಿಯಾಗಿದ್ದು, ಅಸ್ಥಿರವಾಗುವ ಪ್ರಶ್ನೆಯೇ ಇಲ್ಲ.
ಇದು ಬಿಜೆಪಿಯ ಭ್ರಮೆ. ತನ್ನ ಪೂರ್ಣ ಅವಧಿಯನ್ನು ಮುಗಿಸಿ, ನಂತರ 2028 ರಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಧಾನಪರಿಷತ್ತಿನಲ್ಲಿ ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.
ಉತ್ತರ ಕರ್ನಾಟಕದ ಬಗ್ಗೆ ಎರಡೂ ಸದನಗಳಲ್ಲಿ ಹೆಚ್ಚು ಸದಸ್ಯರು ಮಾತನಾಡಿದ್ದಾರೆ. ಇಲ್ಲಿ ಬಿಜೆಪಿಯವರು 7 ಜನ ಹಾಗೂ ಕಾಂಗ್ರೆಸ್ ನ 5 ಜನ ಮಾತನಾಡಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಸೇರಿದಂತೆ ಒಟ್ಟು 5 ಗಂಟೆ 48 ನಿಮಿಷ ಮಾತನಾಡಿದ್ದಾರೆ. ಉತ್ತರ ಕರ್ನಾಟಕದ ಚರ್ಚೆ ಅಧಿವೇಶನದ ಎರಡನೇ ದಿನವೇ ಪ್ರಾರಂಭವಾಗಿದ್ದು, ಇದೇ ಮೊದಲನೇ ಬಾರಿ.ವಿಧಾನ ಪರಿಷತ್ ಅನ್ನು ಹಿರಿಯರ ಮನೆ ಎಂದು ಕರೆಯಲಾಗುತ್ತಿದ್ದು, ಇಲ್ಲಿನ ಸದಸ್ಯರ ಮಾತಿಗೆ ತೂಕವಿರುತ್ತದೆ.




