ಹುಬ್ಬಳ್ಳಿ: ಬಿಜೆಪಿಯವರು ಯಾವಾಗಲೂ ಜನರ ಸಂಪೂರ್ಣ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದವರಲ್ಲ. ಈಗಲೂ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಹಾವೇರಿ ಜಿಲ್ಲೆ ದೇವರಗುಡ್ಡಕ್ಕೆ ತೆರಳಲು ಆಗಮಿಸಿದ ಅವರು ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಹೊಸ ಸಿಎಂ ಬರಲಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.
ಬಿಜೆಪಿಯವರು ರಾಜೀನಾಮೆಗೆ ಆಗ್ರಹಿಸಿದ ಕೂಡಲೇ ಕೊಡೋಕೆ ಆಗೋದಿಲ್ಲ. ವಿಜಯೇಂದ್ರ ರಾಜೀನಾಮೆ ನೀಡುವಂತೆ ನಾನೂ ಆಗ್ರಹಿಸುತ್ತೇನೆ. ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಅವರು ರಾಜೀನಾಮೆ ಕೊಡ್ತಾರಾ ಎಂದು ಪ್ರಶ್ನಿಸಿದರು. ಅಲ್ಲದೆ, ಪ್ರಾಸಿಕ್ಯೂಷನ್ ವಿಚಾರವಾಗಿ ನಾಳೆ ವಿಚಾರಣೆ ನಡೆಯಲಿದೆ. ಹೈಕೋರ್ಟ್ ತೀರ್ಮಾನ ಏನೆಂಬುದು ಸ್ಪಷ್ಟವಾಗಲಿದೆ ಎಂದರು. ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ಸಂಸದರು ಸೇರಿಕೊಂಡು ಶನಿವಾರ ರಾಜ್ಯಪಾಲರನ್ನು ಭೇಟಿಯಾಗಲಿದ್ದೇವೆ. ಎಚ್.ಡಿ.ಕುಮಾರಸ್ವಾಮಿ, ಮುರುಗೇಶ ನಿರಾಣಿ ಹಾಗೂ ಜನಾರ್ಧನ ರೆಡ್ಡಿ ಅವರ ಮೇಲಿರುವ ಪ್ರಾಸಿಕ್ಯೂಷನ್ ತನಿಖೆಗೆ ಆಗ್ರಹಿಸಲಾಗುವುದು. ಈ ಎಲ್ಲ ಪ್ರಕರಣಗಳಲ್ಲೂ ದೋಷರೋಪ ಪಟ್ಟಿ ಸಲ್ಲಿಕೆಯಾಗಿ ತನಿಖೆಯೂ ಪೂರ್ಣಗೊಂಡಿದೆ. ನಮ್ಮ ಪ್ರಕರಣದಲ್ಲಿ ಯಾವುದೇ ವಿಚಾರಣೆ ಆಗಿಲ್ಲ. ಎಲ್ಲವನ್ನೂ ಸೋಕ್ಷ್ಮವಾಗಿ ಗಮನಿಸಿದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿದ್ದಾರೆ ಎಂಬುದು ಸ್ಪಷ್ಟ ಎಂದರು.
ವಿಮಾನ ನಿಲ್ದಾಣದಲ್ಲಿ ಮಹಾನಗರದ ಪ್ರಥಮ ಪ್ರಜೆ ರಾಮಣ್ಣ ಬಡಿಗೇರ ಮತ್ತು ಉಪ ಮೇಯರ್ ದುರ್ಗಮ್ಮ ಬಿಜವಾಡ ಮುಖ್ಯಮಂತ್ರಿಗಳನ್ನು ಸ್ವಾಗತಿಸಿ ಮಹಾನಗರಕ್ಕೆ ಹೆಚ್ಚಿನ ಅನುದಾನ , ಅಲ್ಲದೇ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು. ಮುಖ್ಯಮಂತ್ರಿಗಳೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದರು.
ಸಚಿವರಾದ ಎಚ್.ಕೆ.ಪಾಟೀಲ, ಶಾಸಕ ಪ್ರಸಾದ ಅಬ್ಬಯ್ಯ,ಸಲೀಂ ಅಹ್ಮದ, ಉಭಯ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮುಖಂಡರಾದ ಎಫ್.ಎಚ್.ಜಕ್ಕಪ್ಪನವರ, ಮಹೇಂದ್ರ ಸಿಂಘಿ, ವಿನೋದ ಅಸೂಟಿ, ಗಿರೀಶ ಗದಿಗೆಪ್ಪಗೌಡರ, ಮೊಹ್ಮದ ಕೋಳೂರ ಮುಂತಾದವರು ಸಿಎಂರನ್ನು ಬರಮಾಡಿಕೊಂಡರು.
ಪ್ರಭಾವಿ ಸಚಿವನಿಗೆ ಕ್ಲಾಸ್
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ತಪ್ಪಿಗೆ ಈಗ ಬಳ್ಳಾರಿ ಜೈಲಿಗೆ ವರ್ಗಾವಣೆಯಾಗಿರುವ ನಟ ದರ್ಶನ್ ಗೆ ಸಹಾಯ ಮಾಡಿದ್ದ ಸಚಿವನಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ದರ್ಶನ್ ಗೆ ಎಲ್ಲಾ ರೀತಿಯ ಸಹಾಯ ಮಾಡಲು ರಾಜ್ಯ ಸರ್ಕಾರದ ಪ್ರಭಾವಿ ಸಚಿವರೇ ವ್ಯವಸ್ಥೆ ಮಾಡಿಕೊಟ್ಟಿದ್ದರು ಎನ್ನಲಾಗಿತ್ತು. ಸಚಿವರ ಕೃಪೆಯಿಂದ ದರ್ಶನ್ ಗೆ ಜೈಲಿನಲ್ಲಿ ಬಿರಿಯಾನಿ, ಸಿಗರೇಟು, ಕಾಫಿ ಎಂದು ಎಲ್ಲಾ ರೀತಿಯ ವ್ಯವಸ್ಥೆಯೂ ಆಗಿತ್ತು. ದರ್ಶನ್ ಗೆ ರಾಜಾತಿಥ್ಯ ನೀಡಿದ ವಿಚಾರ ಸರ್ಕಾರಕ್ಕೇ ಮುಜುಗರ ತಂದಿತ್ತು. ವಿಪಕ್ಷಗಳೂ ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು. ಇದೀಗ ಸಿಎಂ ಸಿದ್ದರಾಮಯ್ಯ ಆ ಸಚಿವರನ್ನು ಕರೆಸಿ ಹೀಗೆಲ್ಲಾ ಮಾಡಬೇಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಾಗೇಂದ್ರಗೆ ಆದ ಗತಿಯೇ ನಿನಗೂ ಆದರೆ ಏನು ಮಾಡ್ತೀಯಾ. ಹೀಗೆಲ್ಲಾ ಮಾಡಲು ಹೋಗಬೇಡ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ವರದಿ :- ಸುಧೀರ್ ಕುಲಕರ್ಣಿ