ತುರುವೇಕೆರೆ: -ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಾಯಸಂದ್ರ, ಯಡಿಯೂರು ರಸ್ತೆಯ ಮಾರ್ಗ ಮಧ್ಯದ ಮಾಯಸಂದ್ರ ಕ್ರಾಸ್ನಿಂದ ಅಂಚಿಹಳ್ಳಿವರೆಗಿನ ಡಾಂಬಾರು ರಸ್ತೆ ನಿರ್ಮಾಣಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಚಾಲನೆ ನೀಡಿದರು.
ತಾಲ್ಲೂಕಿನ ಜಡೆಯ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸುಮಾರು 10 ಕೋಟಿ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಯಡಿಯೂರು ಕ್ರಾಸ್ ನಿಂದ ಅಂಚಿಹಳ್ಳಿವರೆಗೆ ಡಾಂಬಾರು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ರಸ್ತೆಯೂ ಆದಲ್ಲಿ ಯಡಿಯೂರು, ಮಾಯಸಂದ್ರ ರಸ್ತೆಯ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳಲಿದೆ ಎಂದರು.
ಯಡಿಯೂರು, ಮಾಯಸಂದ್ರ ರಸ್ತೆಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮೊದಲೇ ಸಾರ್ವಜನಿಕರು ಹಾಗೂ ರೈತಾಪಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಈಗಲೇ ರಸ್ತೆಯ ಮಧ್ಯೆ ಪೈಪುಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ರಸ್ತೆ ನಿರ್ಮಾಣವಾದ ನಂತರ ರಸ್ತೆಯನ್ನು ಅಗೆದು ಪೈಪುಗಳನ್ನು ಅಳವಡಿಸಲು ಮುಂದಾದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ರಸ್ತೆ ಉತ್ತಮ ಗುಣಮಟ್ಟದಿಂದ ನಿರ್ಮಾಣ ಮಾಡಲಾಗುತ್ತಿದ್ದು, ಹತ್ತಾರು ವರ್ಷಗಳ ಕಾಲ ರಸ್ತೆ ಗಟ್ಟಿಮುಟ್ಟಾಗಿ ಇರಲಿದೆ. ರಸ್ತೆ ನಿರ್ಮಾಣಕ್ಕೆ ಮೊದಲೇ ರೈತಾಪಿಗಳು ತಮ್ಮ ಜಮೀನುಗಳಿಗೆ ಅಥವಾ ಮನೆಗಳಿಗೆ ಅಗತ್ಯವಿರುವ ಪೈಪುಗಳನ್ನು ಅಳವಡಿಸಿಕೊಳ್ಳುವುದು. ತದ ನಂತರ ರಸ್ತೆ ಅಗೆದಲ್ಲಿ ರಸ್ತೆ ಬೇಗನೇ ಗುಣಮಟ್ಟ ಕಳೆದುಕೊಂಡು ಹಾಳಾಗಲಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡಿ ರಸ್ತೆ ಹಾಳಾಗದಂತೆ ಮುತುವರ್ಜಿವಹಿಸಬೇಕೆಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂಧರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಭಾಕರ್, ಸಹಾಯಕ ಇಂಜಿನಿಯರ್ ಇಮ್ರಾನ್, ಮಾಯಸಂದ್ರ, ಭೈತರಹೊಸಳ್ಳಿ, ಸೊರನವಹಳ್ಳಿಯ ಹಲವಾರು ಗ್ರಾಮ ಪಂಚಾಯ್ತಿ ಸದಸ್ಯರು, ಜನಪ್ರತಿನಿಧಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್