ತುರುವೇಕೆರೆ: ಪಟ್ಟಣದ ರಾಘವೇಂದ್ರ ಭವನ್ ಮುಂಭಾಗದ ಜಾಗದಲ್ಲಿ ಸ್ಥಳೀಯ ಪಟ್ಟಣ ಪಂಚಾಯ್ತಿ ವತಿಯಿಂದ ಸುಮಾರು 4 ಲಕ್ಷ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ನೆಲಹಾಸು ನೆಲಹಾಸು (ಪಾರ್ಕಿಂಗ್ ಟೈಲ್ಸ್) ಅಭಿವೃದ್ದಿ ಕಾಮಗಾರಿ ನಡೆಸುವ ಸಲುವಾಗಿ ಸ್ಥಳದಲ್ಲಿದ್ದ ಬೀದಿಬದಿ ವ್ಯಾಪಾರಸ್ಥರ ಅಂಗಡಿಮುಂಗಟ್ಟುಗಳನ್ನು ತೆರವುಗೊಳಿಸಲಾಯಿತು.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಪಟ್ಟಣದ ಪ್ರಮುಖ ರಸ್ತೆಯಾದ ವೈ.ಟಿ.ರಸ್ತೆಯ ಆಸುಪಾಸಿನಲ್ಲಿ ಪಟ್ಟಣ ಪಂಚಾಯ್ತಿಗೆ ಸೇರಿದ ಜಾಗವಿದ್ದು, ಬೀದಿಬದಿ ವ್ಯಾಪಾರಸ್ಥರು ಹಣ್ಣು, ಹೂವು, ತರಕಾರಿ ಅಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಈಗ ತಾಲ್ಲೂಕು ಕಛೇರಿಯ ಎದುರು ಕೋಟ್ಯಾಂತರ ರೂ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿ ಸುತ್ತಲೇ ನೆಲಹಾಸು ಹಾಕಲಾಗಿದೆ. ಶೀಘ್ರದಲ್ಲೇ ಸಂಕೀರ್ಣ ಉದ್ಘಾಟಿಸಿ ನಾಗರೀಕರ ಅನುಕೂಲಕ್ಕೆ ಒದಗಿಸಲಾಗುವುದು. ಮತ್ತೊಂದು ಭಾಗದಲ್ಲಿ ರಾಘವೇಂದ್ರ ಭವನ್ ಹೋಟೆಲ್ ಎದುರು ಪಟ್ಟಣ ಪಂಚಾಯ್ತಿಗೆ ಸೇರಿದ ಜಾಗವಿದೆ. ಈ ಜಾಗದಲ್ಲಿ ಸಾರ್ವಜನಿಕರು ವಾಹನ ನಿಲುಗಡೆ ಮಾಡುತ್ತಿದ್ದಾರೆ, ಅಲ್ಲದೆ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದರು. ಈಗ ಈ ಸ್ಥಳದಲ್ಲಿ ಪಟ್ಟಣ ಪಂಚಾಯ್ತಿಯ ೧೫ನೇ ಹಣಕಾಸು ಯೋಜನೆಯಡಿ ಸುಮಾರು 4 ಲಕ್ಷ ರೂ ವೆಚ್ಚದಲ್ಲಿ ಇಂಟರ್ ಲಾಕಿಂಗ್ ಸಿಸ್ಟಮ್ ಇರುವ ನೆಲಹಾಸು (ಪಾರ್ಕಿಂಗ್ ಟೈಲ್ಸ್) ಹಾಕಲು ಕಾಮಗಾರಿ ಪ್ರಾರಂಭಿಸುವ ಕಾರಣ ವ್ಯಾಪಾರಸ್ಥರನ್ನು ತೆರವುಗೊಳಿಸಲಾಗುತ್ತಿದೆ ಎಂದರು.
ಪಟ್ಟಣದ ಹೃದಯಭಾಗದಲ್ಲಿ ತಾಲ್ಲೂಕು ಕಛೇರಿ ವೃತ್ತದ ಸಮೀಪವಿರುವ ಹೋಟೆಲ್ ಮುಂಭಾಗದಲ್ಲಿ ಪಟ್ಟಣ ಪಂಚಾಯ್ತಿಗೆ ಸೇರಿದ ಜಾಗವಿದೆ. ಯಡಿಯೂರು ತಿಪಟೂರು ರಸ್ತೆಯ ಪಕ್ಕದಲ್ಲೇ ಇರುವ ಈ ಜಾಗದಲ್ಲಿ ಹಣ್ಣು, ತರಕಾರಿ, ಹೂವು ಸೇರಿದಂತೆ ವಿವಿಧ ರೀತಿಯ ಅಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಇದೀಗ ಪಟ್ಟಣ ಪಂಚಾಯ್ತಿ ಈ ಸ್ಥಳದಲ್ಲಿ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲು ಮುಂದಾಗಿರುವುದರಿಂದ ಬೀದಿಬದಿಯ ವ್ಯಾಪಾರಸ್ಥರ ಅಂಗಡಿಮುಂಗಟ್ಟುಗಳನ್ನು ತೆರವುಗೊಳಿಸಿತು.
ಸುಮಾರು 20 ಕ್ಕೂ ಅಧಿಕ ಬೀದಿಬದಿ ವ್ಯಾಪಾರಸ್ಥರು ಅಭಿವೃದ್ದಿ ಕಾಮಗಾರಿ ನಡೆಸುತ್ತಿರುವ ಕಾರಣ ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ತೆರವುಗೊಳಿಸಿ ಕಾಮಗಾರಿಗೆ ಅನುವು ಮಾಡಿಕೊಟ್ಟರು. ಪಟ್ಟಣ ಪಂಚಾಯ್ತಿ ಆರೋಗ್ಯ ನಿರೀಕ್ಷಕ ರಂಗನಾಥ್, ಲೆಕ್ಕ ಪರಿಶೋಧಕ ಸದಾನಂದ್, ಪೌರಕಾರ್ಮಿಕ ಮೇಲ್ವಿಚಾರಕ ಯೋಗೀಶ್ ಸೇರಿದಂತೆ ಪೌರಕಾರ್ಮಿಕ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್