ಯಾದಗಿರಿ : ಜನರಿಗೆ ಪೊಲೀಸರು ಅಂದರೆ ಭಯ, ಗೌರವ ಎರಡೂ ಇದೆ. ನಾಡಿನ ಗಡಿಯ ರಕ್ಷಣೆಗೆ ಸೈನಿಕನಂತೆ, ಸಮಾಜದ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಸದಾ ಮುಂದಿರುತ್ತಾರೆ. ತಮ್ಮ ಜೀವನವನ್ನು ಲೆಕ್ಕಿಸದೇ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಆದರೆ ಇವರ ನಡುವೆಯೇ ಇರುವ ಕೆಲ ಪೊಲೀಸರಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಇದೀಗ ಓರ್ವ ಪೊಲೀಸ್ ಕಾನ್ಸ್ಟೇಬಲ್ಯಿಂದ ಇಲಾಖೆಗೆ ಕಳಂಕ ತರುವಂತಹ ಘಟನೆಯೊಂದು ನಡೆದಿದೆ.
ಪ್ರೀತಿಯ ನಾಟಕವಾಡಿ ಅಪ್ರಾಪ್ತೆ ಮೇಲೆ 2 ವರ್ಷ ನಿರಂತರ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಗುರುಮಠಕಲ್ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ನಡೆದಿದೆ.ಸೈದಾಪುರ ಠಾಣೆ ಕಾನ್ಸ್ಟೇಬಲ್ ಬಲರಾಮನಿಂದ ಲೈಂಗಿಕ ದೌರ್ಜನ್ಯವೆಸಗಲಾಗಿದೆ. ಬಾಲಕಿಯು 16 ವರ್ಷದವಳಿದ್ದಾಗಲೇ ಪುಸಲಾಯಿಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ ಪೊಲೀಸ್ ಪೇದೆ, ಬಳಿಕ ಎರಡು ವರ್ಷ ನಿರಂತರ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ಗರ್ಭಿಣಿ ಆಗಿದ್ದ ಬಾಲಕಿಗೆ ಟ್ಯಾಬ್ಲೆಟ್ ಕೊಟ್ಟು ಮಗು ತೆಗೆಸಿದ ಆರೋಪ ಕೂಡ ಮಾಡಲಾಗಿದೆ.
ಬಾಲಕಿಗೆ 18 ವರ್ಷ ತುಂಬುತ್ತಿದ್ದಂತೆ 2024ರ ಡಿಸೆಂಬರ್ನಲ್ಲಿ ಪಿಸಿ ಬಲರಾಮ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಇತ್ತ ಬಲರಾಮ ಕುಟುಂಬ ಬಾಲಕಿಯನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಹೀಗಾಗಿ ಬಾಲಕಿಗೂ, ನನಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ ಪಿಸಿ ಬಲರಾಮ. ಹೀಗಾಗಿ ಬಾಲಕಿ ಮತ್ತು ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಲರಾಮ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ.