ಬೆಳಗಾವಿ : ಯುವಕನ ವಾಟ್ಸಾಪ್ ಸ್ಟೇಟಸ್ ದೊಡ್ಡ ಸಂಘರ್ಷವನ್ನೇ ತಂದೊಡ್ಡಿದೆ. ರಾಯಬಾಗದ ಬೆಕ್ಕೇರಿಯಲ್ಲಿ ಹೋಳಿ ಹಬ್ಬ ಆಚರಣೆ ಮಾಡಿದ ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಮೊದಲಿಗೆ ಹೋಳಿ ಕುರಿತು ಓರ್ವ ಯುವಕ ವಾಟ್ಸಾಪ್ ಸ್ಟೇಟಸೊಂದನ್ನು ಹಾಕಿಕೊಂಡಿದ್ದಾನೆ.ಅದರಲ್ಲಿ ಅಂಬೇಡ್ಕರ್ ಕುರಿತು ಬರೆದು ಹಾಕಿದ್ದು, ಬೇರೊಂದು ಸಮುದಾಯದ ಯುವಕರನ್ನು ಕೆರಳಿಸುವಂತೆ ಮಾಡಿದೆ.ಈ ವಿಚಾರಕ್ಕೆ ಎರಡು ಸಮುದಾಯದ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಬಳಿಕ ಸ್ಟೇಟಸ್ ಹಾಕಿ ಕೊಂಡಿದ್ದ ಯುವಕ ಮತ್ತಷ್ಟು ಯುವಕರನ್ನು ಕರೆದುಕೊಂಡು ಬಂದು ಅಂಬೇಡ್ಕರ್ ಪ್ರತಿಮೆ ಸುತ್ತ ಹಾಕಲಾಗಿದ್ದ ಕಾಂಪೌಂಡ್ ಬೀಳಿಸಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಅಂಬೇಡ್ಕರ್ ಕಾಲೋನಿಯ ಜನರು ಹಾಗೂ ಬೇರೊಂದು ಸಮುದಾಯದ ಜನರ ನಡುವೆ ಕಲ್ಲು ತೂರಾಟ ನಡೆದಿದೆ.
ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪೊಲೀಸರು ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಿ ಇಡೀ ಗ್ರಾಮವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬೆಳಗಾವಿಯಿಂದ ಎರಡು ಡಿಆರ್ ತುಕಡಿ ಕೂಡ ರವಾನಿಸಲಾಗಿದೆ.
ಗಲಾಟೆ ಹತೋಟಿಗೆ ಬಂದಿದ್ದರೂ ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ಗ್ರಾಮದಲ್ಲಿದೆ. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.